ಸುದ್ದಿಮೂಲ ವಾರ್ತೆ
ಮೈಸೂರು,ನ.28: ಒಂದೇ ಒಂದು ತಿಂಗಳಲ್ಲಿ ಇಬ್ಬರನ್ನು ಬಲಿ ಪಡೆದು ಕಾಡಂಚಿನ ಗ್ರಾಮಗಳ ರೈತರನ್ನು ಕಾಡುತ್ತಾ ನಿದ್ರೆ, ನೆಮ್ಮದಿಯನ್ನು ಹಾಳು ಮಾಡಿದ್ದ ನರಭಕ್ಷಕ ಹುಲಿ, ಅರಣ್ಣ ಇಲಾಖೆ ಸಿಬ್ಬಂದಿ ಬೀಸಿದ ಬಲೆಗೆ ಬಿದ್ದಿದೆ. ಇದು ಸದ್ಯಕ್ಕೆ ಸಮಾಧಾನದ ವಿಚಾರವಾದರೂ ಮತ್ತೊಂದು ಹುಲಿ ಸಿಗುವವರೆಗೂ ಆತಂಕ ಮುಂದುವರಿಯಲಿದೆ.
ನಂಜನಗೂಡು ತಾಲ್ಲೂಕು ಹೆಡಿಯಾಲ ಬಳಿ ಅರೆವಳಿಕೆ ಚುಚ್ಚುಮದ್ದು ನೀಡಿ ಹುಲಿಯನ್ನು ಸೆರೆ ಹಿಡಿಯಲಾಯಿತು. ಸೋಮವಾರ ಮಧ್ಯ ರಾತ್ರಿ ಓಂಕಾರ ಮತ್ತು ಹೆಡಿಯಾಲ ವಲಯದ ಗಡಿಯಲ್ಲಿ ಜಾನುವಾರು ಮಾಂಸ ತಿನ್ನಲು ಬಂದ ವೇಳೆ ಅರವಳಿಕೆ ಮದ್ದು ನೀಡಿ ಹುಲಿ ಸೆರೆ ಹಿಡಿದು, ಮೈಸೂರಿನ ಕೂರ್ಗಳ್ಳಿ ಸಮೀಪದ ಪ್ರಾಣಿಗಳ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಯಿತು.
ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ 207 ಮಂದಿ ಮತ್ತು 3 ಸಾಕಾನೆಗಳನ್ನು ಕಾರ್ಯಾಚರಣೆಯಲ್ಲಿ ತೊಡಗಿಸಲಾಗಿತ್ತು. 50ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಅಳವಡಿಸಿ ಮತ್ತು ಡ್ರೋನ್ ಕ್ಯಾಮೆರಾದ ಮೂಲಕವೂ ಹುಲಿ ಚಲನವಲನಗಳ ಮೇಲೆ ನಿಗಾ ಇಡಲಾಗಿತ್ತು.
ಹುಲಿ ಬಂದು ಜಾನುವಾರು ಮಾಂಸ ತಿಂದು ಹೋಗಿರುವುದು ಸೆರೆಯಾಗಿತ್ತು. ಇದನ್ನು ಗಮನಿಸಿದ ಇಲಾಖೆಯ ಪಶು ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಅದೇ ಜಾಗದ ಸುತ್ತಮುತ್ತ ಅಡಗಿ ಕುಳಿತಿದ್ದರು. ನಂತರ ಜಾನುವಾರು ಮಾಂಸವನ್ನು ತಿನ್ನಲು ಹುಲಿ ಮತ್ತೆ ಬಂದಾಗ ಅರವಳಿಕೆ ಮದ್ದು ನೀಡಿ ಬಳಿಕ ಬಲೆ ಹಾಕಿ ಸೆರೆ ಹಿಡಿಯಲಾಗಿದೆ. ಹುಲಿ ಆರೋಗ್ಯ ಸದ್ಯ ಉತ್ತಮ ಸ್ಥಿತಿಯಲ್ಲಿದೆ ಎಂದು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕ ರಮೇಶ್ ಕುಮಾರ್ ತಿಳಿಸಿದ್ದಾರೆ.
ಬಳ್ಳೂರುಹುಂಡಿ ಗ್ರಾಮದಲ್ಲಿ ನ. 24 ರಂದು 52 ವರ್ಷದ ರತ್ನಮ್ಮ ಹುಲಿ ದಾಳಿಯಿಂದ ಸಾವನ್ನಪ್ಪಿದ್ದರು. ಮಧ್ಯಾಹ್ನ ತಮ್ಮ ಜಮೀನಿನಲ್ಲಿ ಜಾನುವಾರು ಮೇಯಿಸುತ್ತಿದ್ದ ವೇಳೆ ರತ್ನಮ್ಮ ಮೇಲೆ ಹುಲಿ ದಾಳಿ ಮಾಡಿ ಹೊತ್ಯೊಯ್ದಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಶೋಧ ಕಾರ್ಯ ನಡೆಸಿದಾಗ ರತ್ನಮ್ಮ ಮೃತದೇಹ ಕಾಡಂಚಿನ ಪ್ರದೇಶದಲ್ಲಿ ಪತ್ತೆಯಾಗಿತ್ತು.
ಇದೇ ಸ್ಥಳದಲ್ಲಿ ಸುಮಾರು ಒಂದು ತಿಂಗಳ ಹಿಂದೆ ವೀರಭದ್ರ ಭೋವಿ ಎಂಬ ದನ ಗಾಹಿ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿತ್ತು.
ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಮೊಳೆಯೂರು ವಲಯ ಅರಣ್ಯ ಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ಜಮೀನಿನಲ್ಲಿ ದನ ಮೇಯಿಸುತ್ತಿದ್ದ ರೈತನ ಮೇಲೆ ಕೂಡ ಹುಲಿ ದಾಳಿ ಮಾಡಿ ಎಳೆದೊಯ್ದಿತ್ತು. ತಾಲೂಕಿನ ಬಿ.ಮಟಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾಡಬೇಗೂರು ಗ್ರಾಮದ ರೈತ ಮತ್ತು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಾಲಾಜಿ ನಾಯ್ಕ (42) ಮೃತದೇಹ ಕಾಡಿನಲ್ಲಿ ಪತ್ತೆಯಾಗಿತ್ತು.