ಸುದ್ದಿಮೂಲ ವಾರ್ತೆ
ಮೈಸೂರು,ನ.28:ನಗರದ ಜಿಲ್ಲಾ ಪಂಚಾಯಿತಿ ನಜೀರ್ ಸಾಬ್ ಸಭಾಂಗಣದಲ್ಲಿ ಮಂಗಳವಾರ ಸಂಸದ ಪ್ರತಾಪ್ ಸಿಂಹ ಅವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ದಿಶಾ ಸಭೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಪ್ರತಿಧ್ವನಿಸಿತು.
ಸಭೆಯಲ್ಲಿ ಮೈಸೂರಿನಲ್ಲಿ ನಡೆದಿರುವ ಭ್ರೂಣ ಹತ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆದು, ಮೈಸೂರಿನಲ್ಲಿ ನಡೆದಿರುವ ಭ್ರೂಣ ಹತ್ಯೆಗಳ ಹತ್ಯೆ ಹೇಯ ಕೃತ್ಯ ಅವಮಾನಕರ ಸಂಗತಿ. ಈ ಬಗ್ಗೆ ಇದುವರೆಗೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರತಾಪ್ ಸಿಂಹ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಅಧಿಕೃತವಾಗಿ ನಡೆಯುತ್ತಿರುವ ಯಾವುದೇ ಆರೋಗ್ಯ ಕೇಂದ್ರದಲ್ಲಿ ಭ್ರೂಣ ಹತ್ಯೆ ನಡೆದಿಲ್ಲ. ಆದರೆ ಅನಧಿಕೃತವಾಗಿ ಈ ಕೃತ್ಯ ನಡೆಸಲಾಗಿದೆ. ಈ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡುವುದಾಗಿ ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಜೇಂದ್ರ ಪ್ರತಿಕ್ರಿಯಿಸಿದರು.
ಭ್ರೂಣಹತ್ಯೆ ಬಗ್ಗೆ ಆರೋಗ್ಯ ಇಲಾಖೆ ಏಕೆ ಪರಿಶೀಲನೆ ನಡೆಸಿಲ್ಲ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೀರಾ ಎಂದು ಆರೋಗ್ಯಾಧಿಕಾರಿ ಕುಮಾರಸ್ವಾಮಿಯನ್ನು ಪ್ರಶ್ನಿಸಿದ ಡಿಸಿ ರಾಜೇಂದ್ರ, ಕೂಡಲೇ ಆರೋಗ್ಯಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಮುಖ್ಯಮಂತ್ರಿ ಹಾಗು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಮಗ್ರ ಮಾಹಿತಿ ನೀಡುವಂತೆ ಸೂಚಿಸಿದ ಸಂಸದ ಪ್ರತಾಪ್ ಸಿಂಹ, ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಪ್ರತಾಪ್ ಸಿಂಹ ಮಾತನಾಡಿ, ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಮೈಸೂರು ಸೇರಿದಂತೆ ಮೂರು ಜಿಲ್ಲೆಗಳಿಗೆ ವಿಸ್ತರಿಸಿದೆ. ಹಾಗಾಗಿ ಮೈಸೂರು ನಗರ ಪೊಲೀಸರು ಇದರ ತನಿಖೆ ನಡೆಸುವುದಿಲ್ಲ. ರಾಜ್ಯ ಪೊಲೀಸ್ ಇಲಾಖೆ ಇದರ ತನಿಖೆ ನಡೆಸುತ್ತದೆ ಎಂದು ತಿಳಿಸಿದ್ದಾರೆ. ಪೊಲೀಸರು ಆದಷ್ಟು ಬೇಗ ತನಿಖೆ ಕೈಗೆತ್ತಿಕೊಳ್ಳಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಹೇಳಿದರು.
ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಕುರಿತು ಡಿಎಚ್ಒಗೆ ಪ್ರಾಥಮಿಕ ವರದಿ ನೀಡುವಂತೆ ಕೇಳಿದ್ದೇನೆ. ಮಾತಾ ಆಸ್ಪತ್ರೆ ಕೆಪಿಎಂನಲ್ಲಿ ರಿಜಿಸ್ಟರ್ ಆಗಿಲ್ಲಾ ಎಂದು ಮಾಹಿತಿ ನೀಡಿದ್ದಾರೆ. ಅದಕ್ಕೆ ಟ್ರೇಡ್ ಲೈಸೆನ್ಸ್ ಕೂಡ ಇರಲಿಲ್ಲ. ಈಗ ನಾವು, ಕಮಿಷನರ್, ಡಿಎಚ್ಒ ಸೇರಿ ಸ್ಥಳ ಪರಿಶೀಲನೆ ಮಾಡುತ್ತಾರೆ. ಇಲ್ಲಿಯವರೆಗೂ ಈ ಬಗ್ಗೆ ಯಾವುದೇ ದೂರು ಬಂದಿರಲಿಲ್ಲ. ಹೀಗಾಗಿ, ಯಾರಿಗೂ ಕೂಡ ಗೊತ್ತಾಗಿಲ್ಲ. ಅಪರೇಷನ್ ಗೆ ಒಳಗಾದ ಪೋಷಕರನ್ನು ಪೊಲೀಸರು ತನಿಖೆ ಮಾಡಿ ಪತ್ತೆ ಮಾಡುತ್ತಾರೆ. ಅವರಿಗೂ ಶಿಕ್ಷೆ ಆಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಈ ಪ್ರಕರಣದಿಂದಾಗಿ ಜಿಲ್ಲೆಯಲ್ಲಿರುವ ಎಲ್ಲಾ ಮೆಡಿಕಲ್ ಸ್ಟೋರ್ ಹಾಗೂ ಕ್ಲಿನಿಕ್ ಗಳ ಪರಿಶೀಲನೆ ಮಾಡಲಾಗುತ್ತಿದ್ದು, ಪ್ರತಿಯೊಬ್ಬರೂ ತಮ್ಮ ಟ್ರೇಡ್ ನಂಬರ್ ಹಾಗೂ ರಿಜಿಸ್ಟ್ರೇಷನ್ ನಂಬರ್ ಡಿಸ್ಪ್ಲೇ ಮಾಡಬೇಕು. ಇಲ್ಲಿಯವರೆಗೆ ಅನುಮತಿ ಇಲ್ಲದೇ ಯಾರಾದರೂ ಕ್ಲಿನಿಕ್ ಹಾಗೂ ಮೆಡಿಕಲ್ ಸ್ಟೋರ್ ನಡೆಸುತ್ತಿದ್ದರೆ ಅವರ ಟ್ರೇಡ್ ಲೈಸನ್ಸ್ ರದ್ದು ಮಾಡಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರ.
ಮೈಸೂರು ಮಹಾನಗರಪಾಲಿಕೆ ಆಯುಕ್ತ ಅಸಾದ್ ಉರ್ ರೇಹಮಾನ್ ಷರೀಫ್ ಮಾತನಾಡಿ, ಮೈಸೂರಿನಲ್ಲಿ ಭ್ರೂಣ ಹತ್ಯೆ ಪ್ರಕರಣ, ಮೈಸೂರು ಮಹಾನಗರ ಪಾಲಿಕೆಯಿಂದ ಆಸ್ಪತ್ರೆಗೆ ಟ್ರೇಡ್ ಲೈಸೆನ್ಸ್ ಆಗಿಲ್ಲ.ಪಾಲಿಕೆಯ ವಲಯ ಕಚೇರಿ ಅಧಿಕಾರಿಯಿಂದ ಲೋಪ ಆಗಿರಬಹುದು. ಈ ಬಗ್ಗೆ ತನಿಖೆ ನಡೆಸಲಾಗುವುದು. ಹಲವು ಆಸ್ಪತ್ರೆಗಳಿಗೆ ಟ್ರೇಡ್ ಲೈಸೆನ್ಸ್ ಇರುವುದಿಲ್ಲ. ಆಸ್ಪತ್ರೆ ಅಥವಾ ಕ್ಲಿನಿಕ್ ನಡೆಸಲು ಕೆ ಪಿ ಎಂ ಇ ಕಾಯ್ದೆಯಡಿ ಅನುಮತಿ ಪಡೆಯಬೇಕು. ಅದರಂತೆ ತಂಡ ರಚನೆ ಮಾಡಿ ಎಲ್ಲಾ ಕಡೆಯೂ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.
ಪಿಪಂ ಸಿಇಓ ಕೆ.ಎಂ. ಗಾಯತ್ರಿ ಗಾಯತ್ರಿ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.