ಸುದ್ದಿಮೂಲ ವಾರ್ತೆ
ಹೊಸಕೋಟೆ,ನ.30: ವಚನ ಸಾಹಿತ್ಯದ ನಂತರ ಸಮಾಜಮುಖಿ ಸಾಹಿತ್ಯ ಮತ್ತೆ ಸೃಷ್ಟಿಯಾಗತೊಡಗಿದ್ದು ಹರಿದಾಸ ಪರಂಪರೆಯ ಮೂಲಕ ಎಂದು ಕೆಪಿಎಸ್ ಶಾಲೆಯ ಪ್ರಾಂಶುಪಾಲರಾದ ಸಿದ್ದರಾಮಯ್ಯ ಹೇಳಿದರು.
ಅವರು ಹೊಸಕೋಟೆ ತಾಲೂಕಿನ ನಂದುಗುಡಿ ಗ್ರಾಮದಲ್ಲಿ ಇರುವ ಕೆಪಿಎಸ್ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ 536ನೇ ಕನಕ ಜಯಂತಿ ಉತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ಸಮಾಜದಲ್ಲಿದ್ದ ಅಂಕು-ಡೊಂಕುಗಳನ್ನು ತಿದ್ದಲು ವಚನಕಾರರು 12ನೇ ಶತಮಾನದಲ್ಲಿ ಪ್ರಯತ್ನಿಸುತ್ತಾರೆ. ಇವರ ನಂತರ 15, 16ನೇ ಶತಮಾನದಲ್ಲಿ ಬಂದ ದಾಸ ಸಾಹಿತ್ಯವೂ ಸಮಾಜದಲ್ಲಿನ ವೈರುಧ್ಯಗಳ ಬಗ್ಗೆ ಮತ್ತು ಜನರ ಜೀವನ ಮೌಲ್ಯಗಳ ಮೇಲೆ ಬೆಳಕು ಚೆಲ್ಲುತ್ತ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಲು ಪ್ರಯತ್ನಿಸುತ್ತದೆ. ದಾಸ ಸಾಹಿತ್ಯದ ಪರಂಪರೆಯಲ್ಲಿ ನಾವು ಮುಖ್ಯವಾಗಿ ಪುರಂದದಾಸರು, ಕನಕದಾಸರು, ಕಬೀರ್ ದಾಸರು, ಸಂತ ತುಕಾರಾಂ ಅವರನ್ನು ಕಾಣಬಹುದು.
ಕನಕದಾಸರು ತಮ್ಮ ಕೀರ್ತನೆಗಳ ಮುಖಾಂತರ ಜಾತಿವಾದ, ವರ್ಣಭೇದ, ಮೂಢನಂಬಿಕೆಯನ್ನು ಕಟುವಾಗಿ ಖಂಡಿಸಿದರು. ನಳಚರಿತ್ರೆ, ಹರಿಭಕ್ತಿಸಾರ, ನರಸಿಂಹಸ್ತವ, ರಾಮಧಾನ್ಯ ಚರಿತೆ, ಮೋಹನ ತರಂಗಿಣಿ ಇವು ಕನಕದಾಸರ ಕೃತಿಗಳು. ಇವರ ರಾಮಧಾನ್ಯ ಚರಿತೆ ಕೃತಿಯಲ್ಲಿ ಭತ್ತ (ಅಕ್ಕಿ) ಮತ್ತು ರಾಗಿಯ ನಡುವಿನ ಸಂಘರ್ಷದ ಕತೆ ಇರುವುದನ್ನು ಗಮನಿಸಬಹುದು. ಭತ್ತವು ಮೇಲ್ವರ್ಗಕ್ಕೆ ಸೇರಿದ್ದು ರಾಗಿಯು ಕೆಳವರ್ಗಕ್ಕೆ ಸೇರಿದ್ದು ಎಂದು ಮೂದಲಿಸಿ ಸಂಘರ್ಷಕ್ಕೆ ಒಳಪಟ್ಟಾಗ ರಾಮನ ಮುಂದಾಳತ್ವದಲ್ಲಿ ರಾಗಿಗೆ ಜಯ ದೊರೆಯುತ್ತದೆ. ಅಂದರೆ ಯಾರನ್ನೆ ಆಗಲಿ ಅವರ ಗುಣ, ನಡತೆ, ಜ್ಞಾನದಿಂದ ಅವರ ಪ್ರತಿಭೆಯನ್ನು ಅಳೆಯಬೇಕೆ ಹೊರತು ಆತನ ಜಾತಿ ಮುಖ್ಯವಾಗಬಾರದು ಎನ್ನುವುದು ಈ ಸಂಘರ್ಷದ ತಿರುಳು ಎಂದು ಹೇಳಿದರು.
ಸಮಾಜದಲ್ಲಿನ ತಾರತಮ್ಯಗಳನ್ನು ತಿದ್ದಲು ಪ್ರಯತ್ನಿಸಿದ ಕನಕ ದಾಸರು ‘ಕುಲ ಕುಲ ಕುಲವೆನ್ನುತಿಹರು ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ ಕೆಸರೊಳು ತಾವರೆ ಪುಟ್ಟಲು ಅದ ತಂದು ಬಿಸಜನಾಭನಿಗರ್ಪಿಸಲಿಲ್ಲವೆ ಹಸುವಿನ ಮಾಂಸದೊಳುತ್ಪತ್ತಿ ಕ್ಷೀರವಸುಧೆಯೊಳಗೆ ಭೂಸುರರುಣಲಿಲ್ಲವೆ’
ಎಂದು ಹಾಲು ಮತ್ತು ತಾವರೆಗಳಂತೆ ಮನುಷ್ಯನಲ್ಲಿರುವ ಗುಣಮೌಲ್ಯಗಳೆ ಮುಖ್ಯ ಹೊರತು ಆತನು ಹುಟ್ಟಿದ ಜಾತಿ ಮತ ಕುಲಗಳು ಮುಖ್ಯವಲ್ಲ ಎಂದು ಸಾರುತ್ತಾರೆ. ಕನಕದಾಸರ ಇನ್ನೊಂದು ಕೀರ್ತನೆಯಲ್ಲಿ‘ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ’ ಎಂದು ಪ್ರಶ್ನಿಸುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀನಿವಾಸ್, ಇಸ್ಮಾಯಿಲ್, ಸರಸ್ವತಿ, ವಂದನ, ತೇಜಸ್ವಿನಿ, ಸುನಿಲ್,ರಾಜೇಶ್ವರಿ, ತಿಪ್ಪೇಶ್, ಶಾಲೆಯ ಮುಖ್ಯ ಶಿಕ್ಷಕ ಡಿ.ಕೃಷ್ಣಪ್ಪ ಸಹ ಶಿಕ್ಷಕರಾದ ಕೋಮಲ, ನೇತ್ರಾವತಿ, ಜಯಶ್ರೀ,ಯಶೋಧ, ಮಣಿ, ಅಶ್ವಿನಿ, ಚಂದ್ರ ಲೀಲಾ, ದೈಹಿಕ ಶಿಕ್ಷಕರಾದ ಗೋವಿಂದರಾಜು ಹಾಜರಿದ್ದರು.