ಸುದ್ದಿಮೂಲ ವಾರ್ತೆ
ಬೆಂಗಳೂರು: ನ.30: ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಸಂಶೋಧನೆ-ಚಾಲಿತ, ಸಾರ್ವಜನಿಕ ತೊಡಗಿಸಿಕೊಳ್ಳುವ ಪ್ರದರ್ಶನಗಳ ಪಾತ್ರ ಪ್ರಮುಖವಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ಹೇಳಿದರು.
ಇಂದು ಹೆಬ್ಬಾಳದಲ್ಲಿರುವ ಬೆಂಗಳೂರು ಸೈನ್ಸ್ ಗ್ಯಾಲರಿಯಲ್ಲಿ ಆಯೋಜಿಸಲಾಗಿದ್ದ ಆರನೇ ಸೈನ್ಸ್ ಸೀಜನ್ ‘ಕಾರ್ಬನ್’ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾರ್ವಜನಿಕರಲ್ಲಿ ಸಂಸ್ಕೃತಿ ಹಾಗೂ ವೈಜ್ಞಾನಿಕ ಕುತೂಹಲವನ್ನು ಬೆಳಸುವ ನಿಟ್ಟಿನಲ್ಲಿ ಬೆಂಗಳೂರು ವಿಜ್ಞಾನ ಗ್ಯಾಲರಿಯನ್ನು ವಿನ್ಯಾಸಗೊಳಿಸಲಾಗಿದೆ. ಕಲೆ, ವಿಜ್ಞಾನ ಮತ್ತು ನಾವಿನ್ಯತೆಗಳನ್ನು ಒಗ್ಗೂಡಿಸುವ ಕಾರ್ಯಕ್ರಮದ ಭಾಗವಾಗಿರುವುದು ಸಂತಸದ ವಿಷಯವಾಗಿದೆ. ಪ್ರದರ್ಶನದಲ್ಲಿ ಇಂಗಾಲ ವಾತಾವರಣದಲ್ಲಿನ ನೈಸರ್ಗಿಕ ರೂಪ ಸೇರಿದಂತೆ, ‘ಕಾರ್ಬನ್’ ಪ್ರದರ್ಶನವು 35 ಕ್ಕೂ ಹೆಚ್ಚು ಸಂವಾದಾತ್ಮಕ ಪ್ರದರ್ಶನಗಳನ್ನು ಓಳಗೊಂಡಿದೆ. ಇಂಗಾಲದ ಬಹುಮುಖಿ ಸ್ವರೂಪವನ್ನು ತೋರಿಸುವುದಲ್ಲದೆ, ಅದರ ರೂಪಗಳು ಮತ್ತು ಪಾತ್ರಗಳನ್ನು ಪ್ರದರ್ಶಿಲಾಗುತ್ತಿದೆ. ಕಲ್ಲಿದ್ದಲು ಗಣಿಗಾರಿಕೆ ಮತ್ತು ಇಂಗಾಲದ ಕ್ರೆಡಿಟ್ಗಳಿಂದ ಸರ್ ಸಿವಿ ರಾಮನ್ ಅವರ ವಜ್ರದ ಸಂಶೋಧನೆ ಮತ್ತು ಜೀವನದ ಮೂಲದಲ್ಲಿ ಇಂಗಾಲದ ಪಾತ್ರವನ್ನು ಇಂದಿನ ಪ್ರದರ್ಶನ ಒಳಗೊಂಡಿದೆ. ಸಾರ್ವಜನಿಕರಲ್ಲಿ ವಿಜ್ಞಾನದ ಆಸಕ್ತಿಯನ್ನು ಹೆಚ್ಚಿಸುವಂತಿದೆ ಎಂದು ಶ್ಲಾಘಿಸಿದರು.
ಇಂತಹ ಆಕರ್ಷಕ ಕಾರ್ಯಕ್ರಮಗಳ ಮೂಲಕ ಯುವ ಜನರನ್ನ ವಿಜ್ಞಾನದೆಡೆಗೆ ಆಕರ್ಷಿತಾಗುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಬೆಂಗಳೂರು ಸೈನ್ಸ್ ಗ್ಯಾಲರಿ ಪ್ರಯತ್ನಗಳು ಶ್ಲಾಘನೀಯ. ಬೆಂಗಳೂರು ಹವಾಮಾನ ಕ್ರಿಯಾ ಯೋಜನೆ ಅನುಷ್ಠಾನದ ನಿಟ್ಟಿನಲ್ಲಿ ಪ್ರದರ್ಶನ ಪ್ರಸ್ತುತವಾಗಿದೆ. ಇಂತಹ ಪ್ರಮುಖ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಇಂತಹ ಸಂಶೋಧನೆ-ಚಾಲಿತ, ಸಾರ್ವಜನಿಕರು ತೊಡಗಿಸಿಕೊಳ್ಳುವ ಪ್ರದರ್ಶನಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಐಟಿ ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಸರಕಾರದ ಕಾರ್ಯದರ್ಶಿಗಳಾದ ಏಕ್ ರೂಪ ಕೌರ್, ಕೇಸ್ಟೆಪ್ಸ್ ಎಂ ಡಿ ಪವನ್ ಕುಮಾರ್ ಮಾಲಪಾಟಿ, ನಿವೃತ್ತ ಐ ಎ ಎಸ್ ಅಧಿಕಾರಿ ಐ ಎಸ್ ಎನ್ ಪ್ರಸಾದ್, ಬಯೋಕಾನ್ ನ ಕಾರ್ಯನಿರ್ವಾಹಕ ಅಧ್ಯಕ್ಷರಾದ ಡಾ. ಕಿರಣ್ ಮಜೂಮ್ದಾರ್ ಷಾ, ಆಕ್ಸಿಲರ್ ವೆಂಚರ್ಸ್ ಮುಖ್ಯಸ್ಥರಾದ ಸೇನಾಪತಿ ಗೋಪಾಲಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.