ಸಜಾಗುತ್ತಿದೆ ನಗರದ ಬುಲ್ ಟೆಂಪಲ್ ರಸ್ತೆ
ಚಿತ್ರ, ವರದಿ : ಜಿ.ಮೋಹನ್ ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ. 07 : ಪ್ರತಿ ವರ್ಷ ಕಾರ್ತಿಕ ಮಾಸದ ಕಡೆಯ ಸೋಮವಾರ ನಡೆಯುವ ವಿಶ್ವ ವಿಖ್ಯಾತ ಬಸವನಗುಡಿಯ ಕಡಲೆ ಕಾಯಿ ಪರಿಷೆಗೆ ನಗರದ ಬಸವನಗುಡಿ ಬುಲ್ ಟೆಂಪಲ್ ರಸ್ತೆ ಸಜ್ಜಾಗುತ್ತಿದೆ.
ಬಸವನಗುಡಿಯ ದೊಡ್ಡ ಬಸವಣ್ಣ ಮತ್ತು ಗಣಪತಿ ದೇವಸ್ಥಾನದ ಪ್ರಾಂಗಣದಲ್ಲಿರುವ ಬೃಹದಾಕಾರದ ನಂದಿ ವಿಗ್ರಹ ಪುರಾಣ ಪ್ರಸಿದ್ಧವಾಗಿದೆ , ಜೊತೆಗೆ ಶಿವನ ನೆಚ್ಚಿನವಾರ ಸೋಮವಾರ ಹಾಗು ನಂದಿಯು ಶಿವನ ವಾಹನ ವಾಗಿರುವುದರಿಂದ ಪ್ರತಿ ವರ್ಷ ಕಾರ್ತಿಕ ಮಾಸದ ಕಡೆಯ ಸೋಮವಾರ ದೇವಸ್ಥಾನದಲ್ಲಿ ವಿಶೇಷ ಪೂಜೆ ಅಲಂಕಾರಗಳಿಂದ ವಿಶ್ವ ವಿಖ್ಯಾತ ಕಡಲೇಕಾಯಿ ಪರಿಷೆ ಉದ್ಘಾಟನೆಗೊಳ್ಳುತ್ತದೆ.
ಬಡವರ ಬಾದಾಮಿಯೆಂದೇ ಪ್ರಸಿದ್ದವಾಗಿರುವ ಈ ಪರಿಷೆಗೆ ಬಾರದ ಸಿದ್ದತೆಗಳು ನಡೆಯುತ್ತಿವೆ. ಇದರ ಪೂರ್ವಭಾವಿಯಾಗಿ ಇಂದು ವ್ಯಾಪಾರಸ್ಥರು ತಮ್ಮ ಕಡಲೇಕಾಯಿ ಅಂಗಡಿ ತೆರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ , ಇದರ ಜೊತೆಗೆ ವಿವಿಧ ಬಗೆಯ ಬಣ್ಣದ ಆಟಿಕೆಗಳು ಜಗಮಗಿಸುವ ವಿದ್ಯುತ್ ದೀಪಾಲಂಕಾರಗಳಿಂದ ಬುಲಟೆಂಪಲ್ ರಸ್ತೆ ಕಂಗೊಳಿಸಲು ಸಜ್ಜಾಗುತ್ತಿದೆ.
ಪ್ರತೀ ವರ್ಷ ಇಲ್ಲಿ ಒಂದು ಸಾವಿರ ಮಳಿಗೆಗಳು ತೆರೆದುಕೊಳ್ಳುತ್ತವೆ , ಇದು ದೇವಸ್ಥಾನದ ಮುಖ್ಯ ರಸ್ತೆ ಅಷ್ಟೇ ಅಲ್ಲದೆ ಅದರ ಅಕ್ಕ ಪಕ್ಕದ ರಸ್ತೆಗಳಲ್ಲೂ ಮಳಿಗೆ ಹಾಗು ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ವಹಿವಾಟು ಜೋರಾಗಿರುತ್ತದೆ .
ಇಲ್ಲಿ ಪ್ರತಿ ಮಳಿಗೆ ಹಾಕಲು ಅದರ ಗುತ್ತಿಗೆ ಪಡೆದವರು 4 ರಿಂದ 5 ಸಾವಿರ ಪಡಿಯುತ್ತಾರೆ ಎನ್ನುವ ಮಳಿಗೆ ವ್ಯಾಪಾರಿಗಳು ಪಾಲಿಕೆಯಿಂದ ಯಾವುದೇ ತೊಂದರೆ ಇಲ್ಲ. ಆದರೆ ಎರಡು ದಿನಕ್ಕೆ 5 ಸಾವಿರ ಹೆಚ್ಚೆನ್ನುವ ವ್ಯಾಪಾರಸ್ಥರು ಈ ವರ್ಷ ಮಳೆ ಬಾರದ ಕಾರಣ ಪಸಲು ಕಡಿಮೆಯಾಗಿ ನಾವೇ ದುಪ್ಪಟು ಕೊಟ್ಟು ಖರೀದಿಸಿದ್ದೀವಿ. ಕಳೆದ ವರ್ಷ 30 ರಿಂದ 40 ರೂ ಲೀಟರಿಗೆ ಇದ್ದ ಕಡಲೆ ಕಾಯಿ ಈ ವರ್ಷ 50 ರಿಂದ 60 ರೂ.ಗೆ ಹೆಚ್ಚಿಸಬೇಕಾಗಿದೆ ಎನ್ನುತ್ತಾರೆ.
ಒಟ್ಟಾರೆ ವಿಶ್ವ ವಿಖ್ಯಾತ ಬಡವರ ಬಾದಾಮಿ ಕಡಲೇಕಾಯಿ ಪರಿಷೆಗೆ ಜನ ಜಾತ್ರೆ ಸೇರಿ ಸಂಭ್ರಮಿಸುವುದಂತೂ ಗ್ಯಾರಂಟಿ.