ನವದೆಹಲಿ, ಸೆ.12: ಕಮ್ಯೂನಿಸ್ಟ್ ಚಳವಳಿಯ ರೂವಾರಿ, ಹೆಸರಾಂತ ಸಂಸದೀಯ ಪಟು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಹಿರಿಯ ನಾಯಕ, ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಗುರುವಾರ ನಿಧನವಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.
ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ನವದೆಹಲಿಯ ಏಮ್ಸ್ ಆಸ್ಪತ್ರೆಗೆ ಕಳೆದೆರಡು ದಿನಗಳ ಹಿಂದೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ವೈದ್ಯಕೀಯ ಸಂಶೋಧನೆಗೆ ನೆರವಾಗಲು ಯೆಚೂರಿ ಮೃತದೇಹವನ್ನು ಏಮ್ಸ್ ಆಸ್ಪತ್ರೆಗೆ ದಾನ ಮಾಡಲಾಗಿದೆ ಎಂದು ಸಿಪಿಐ (ಎಂ) ಪಕ್ಷದಿಂದ ತಿಳಿಸಲಾಗಿದೆ.
ಸೀತಾರಾಂ ಯೆಚೂರಿ ಅವರು ಚೆನ್ನೈನಲ್ಲಿ ಆಗಸ್ಟ್ 12, 1952 ರಂದು ಜನಿಸಿದದ್ದರು. ಹೈದರಾಬಾದ್ನಲ್ಲಿ ವಿದ್ಯಾಭ್ಯಾಸ ಮಾಡಿದ ಯೆಚೂರಿ 1974ರಲ್ಲಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ) ಸೇರುವ ಮೂಲಕ ಕಮ್ಯೂನಿಸ್ಟ್ ಚಳವಳಿಗೆ ಧುಮುಕಿದರು. ಮೂರು ಬಾರಿ ಜೆಎನ್ಯು ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾಗಿದ್ದರು. ಎಸ್ಎಫ್ಐ ಅಖಿಲ ಭಾರತದ ಅಧ್ಯಕ್ಷರಾದರು, 1984ರಲ್ಲಿ ಅವರು ಸಿಪಿಐ (ಎಂ) ಕೇಂದ್ರ ಸಮಿತಿಗೆ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದರು. 1992 ರಿಂದ ಮೂರು ದಶಕಗಳ ಕಾಲ ಪಾಲಿಟ್ಬ್ಯೂರೊದ ಸದಸ್ಯರಾಗಿದ್ದರು. ಭಾರತೀಯ ರಾಜಕೀಯ ಕ್ಷೇತ್ರದಲ್ಲಿ ಯೆಚೂರಿ ಅವರದು ಪ್ರಮುಖ ಹೆಸರು. ಸಮ್ಮಿಶ್ರ ರಾಜಕೀಯಕ್ಕೆ ಅವರ ಕಾರ್ಯತಂತ್ರದ ವಿಧಾನ ಮತ್ತು ಮಾರ್ಕ್ಸ್ವಾದದ ತತ್ವಗಳನ್ನು ಅನುಸರಿಸುವ ಮೂಲಕ ಹೆಸರು ಮಾಡಿದ್ದರು.
ಸೀತಾರಾಮ್ ಯೆಚೂರಿ 2005 ರಿಂದ 2017 ರವರೆಗೆ ಪಶ್ಚಿಮ ಬಂಗಾಳದಿಂದ ಸಂಸತ್ತಿನ ಸದಸ್ಯರಾಗಿ, ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಕಾಶ್ ಕಾರಟ್ ಬಳಿಕ 2015 ರಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಯಾದರು, 2018 ಮತ್ತು 2022 ರಲ್ಲಿ ಎರಡು ಬಾರಿ ಮರು ಆಯ್ಕೆಯಾದರು.
ಮೋದಿ, ರಾಹುಲ್ ಸೇರಿ ಗಣ್ಯರ ಸಂತಾಪ:
ಹಿರಿಯ ಕಮ್ಯೂನಿಷ್ಟ್ ನಾಯಕ ಸೀತಾರಾಮ್ ಯೆಚೂರಿ ನಿಧಕ್ಕೆ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ವಿಪಕ್ಷ ನಾಯಕ ರಾಹುಲ್ಗಾಂಧಿ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
‘ಸೀತಾರಾಮ್ ಯೆಚೂರಿ ಅವರ ನಿಧನದಿಂದ ದುಃಖವಾಗಿದೆ. ಅವರು ಎಡಪಕ್ಷಗಳ ಪ್ರಮುಖ ಬೆಳಕಾಗಿದ್ದರು ಮತ್ತು ರಾಜಕೀಯ ಮೀರಿದ ಸಂಬಂಧ ಬೆಸೆಯುವಲ್ಲಿ ಅವರು ಹೆಸರುವಾಸಿಯಾಗಿದ್ದರು’ ಎಂದು ಪ್ರಧಾನಿ ಮೋದಿ ಗುಣಗಾನ ಮಾಡಿದ್ದಾರೆ.
‘ಭಾರತದ ಬಗ್ಗೆ ಆಳವಾದ ತಿಳುವಳಿಕೆ ಹೊಂದಿದ್ದ, ನೈಜ ಭಾರತದ ಕಲ್ಪನೆಯ ರಕ್ಷಕ. ನಾವಿಬ್ಬರೂ ಸುದೀರ್ಘವಾಗಿ ನಡೆಸಿದ್ದ ಚರ್ಚೆಗಳನ್ನು ಕಳೆದುಕೊಳ್ಳಯತ್ತೇನೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ, ಸ್ನೇಹಿತರು ಮತ್ತು ಅನುಯಾಯಿಗಳಿಗೆ ಸಂತಾಪಗಳು’ ಎಂದು ರಾಹುಲ್ಗಾಂಧಿ ಟ್ವೀಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ ನಿಧನ ರಾಷ್ಟ್ರೀಯ ರಾಜಕೀಯಕ್ಕೆ ನಷ್ಟ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಸಂತಾಪ:
ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಎಡ ಸಿದ್ದಾಂತದ ಪ್ರಖರ ಚಿಂತಕರಾಗಿದ್ದ ಯಚೂರಿ ಅವರು ಅಪ್ಪಟ ಪ್ರಜಾಪ್ರಭುತ್ವವಾದಿಯೂ ಆಗಿದ್ದರು. ಕೋಮುವಾದಿ ರಾಜಕೀಯದ ವಿರುದ್ಧ ಜಾತ್ಯತೀತ ಶಕ್ತಿಗಳ ಒಗ್ಗೂಡಿಸುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯಚೂರಿಯವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ರೂವಾರಿಗಳಲ್ಲೊಬ್ಬರಾಗಿದ್ದರು. ಕಳೆದ ವರ್ಷ ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭಕ್ಕೆ ಆಗಮಿಸಿ, ಶುಭ ಹಾರೈಸಿದ್ದರು. ಇಂಡಿಯಾ ಒಕ್ಕೂಟ ಸ್ಥಾಪನೆಯಲ್ಲಿ ಕೂಡ ಅವರ ಕೊಡುಗೆ ಇದೆ. ಸೀತಾರಾಮ್ ಯಚೂರಿ ಅವರ ನಿಧನದಿಂದ ಕೋಮುವಾದ ಮತ್ತು ಬಂಡವಾಳವಾದದ ವಿರುದ್ಧದ ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬ ಮತ್ತು ಸಂಗಾತಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಹೇಳಿದ್ದಾರೆ.