ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಅ.11: ತಾಲೂಕಿನ ಮೇಲೂರು ಗ್ರಾಮದಲ್ಲಿ ಗಾಂಧಿ ಸ್ಮೃತಿ ಮತ್ತು ದುಶ್ಚಟ ಮುಕ್ತ ಸಮಾಜ ನಿರ್ಮಾಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ, ಪ್ರಗತಿ ಬಂಧು, ಸ್ವ ಸಹಾಯ ಸಂಘಗಳ ಒಕ್ಕೂಟ ಮಳ್ಳೂರು ವಲಯ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಬೈರೇಗೌಡ ಉದ್ಘಾಟಿಸಿದರು.
ಬಳಿಕ ಮಾತನಾಡಿ, ಮದ್ಯಪಾನ ಎನ್ನುವುದು ಹೆಣ್ಣು ಮಕ್ಕಳ ಜೀವನವನ್ನು ಹಾಳುಮಾಡುವುದಲ್ಲದೆ ಇಡೀ ಕುಟುಂಬದ ಸರ್ವನಾಶಕ್ಕೂ ಕಾರಣವಾಗುತ್ತದೆ. ಆದ್ದರಿಂದ ನಾವುಗಳು ಗಾಂಧೀಜಿಯವರ ಆಶಯದಂತೆ ಮದ್ಯಪಾನ ಮುಕ್ತ ಸಮಾಜ ನಿರ್ಮಾಣಕ್ಕೆ ಪಣತೊಡಬೇಕೆಂದು ಹೇಳಿದರು.
ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರಶಾಂತ್ ಮಾತನಾಡಿ, ಗಾಂಧೀಜಿಯವರ ಕನಸಾದ “ಮದ್ಯಪಾನ ನಿರ್ಮೂಲನೆ”ಯನ್ನು ಈಡೇರಿಸಲು ಪೂಜ್ಯರು ಮದ್ಯವರ್ಜನ ಶಿಬಿರಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು.
ಮೇಲೂರು ಗ್ರಾ.ಪಂ ಸದಸ್ಯ ಉಮೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನ ಮಕ್ಕಳೇ ಮಧ್ಯಪಾನ ಸೇರಿದಂತೆ ಎಲ್ಲ ರೀತಿಯ ದುಶ್ಚಟಗಳ ದಾಸರಾಗುತ್ತಿರುವುದು ಕಂಡುಬರುತ್ತಿದ್ದು, ಇದು ಅವರ ಆರೋಗ್ಯಕ್ಕೆ ಹಾನಿ ಉಂಟು ಮಾಡುವುದಲ್ಲದೆ ಇಡೀ ಸಮಾಜದ ಸ್ವಾಸ್ತ್ಯವನ್ನು ಹಾಳು ಮಾಡುತ್ತದೆ. ಆದ್ದರಿಂದ ನಾವುಗಳು ಇಂತಹ ದುಶ್ಚಟಗಳ ವಿರುದ್ಧ ಹೋರಾಡಬೇಕು ಆಗ ಮಾತ್ರ ನಾವು ಗಾಂಧೀಜಿಯವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿ ಸುರೇಶ್ ಗೌಡ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ತ್ಯಾಗರಾಜು, ಸುರೇಶ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಮೇಲೂರು ಶಾಖೆಯ ವ್ಯವಸ್ಥಾಪಕರಾದ ಸತ್ಯನಾರಾಯಣ, ವಲಯ ಮೇಲ್ವಿಚಾರಕರದ ಧನಂಜಯ್, ವಲಯದ ಸೇವಾ ಪ್ರತಿನಿಧಿಗಳು, ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸ್ವಸಹಾಯ ಹಾಗೂ ಪ್ರಗತಿಬಂದು ಸಂಘದ ಸದಸ್ಯರು ಉಪಸ್ಥಿತರಿದ್ದರು.