ಸುದ್ದಿಮೂಲ ವಾರ್ತೆ
ಬೆಂಗಳೂರು,ಸೆ.21:ಮೈಸೂರು ಸಾಂಪ್ರದಾಯಿಕ ಚಿತ್ರಕಲಾವಿದೆ ಡಾ.ಮೀರಾ ಕುಮಾರ್ ರವರ ನಿವಾಸ ವಿಶ್ವಂಭರದಲ್ಲಿ ಗಣೇಶೋತ್ಸವವನ್ನು ವಿಶಿಷ್ಠವಾಗಿ ಆಚರಿಸಲಾಯಿತು .
ಮಾರುಕಟ್ಟೆಯಲ್ಲಿ ದೊರೆಯುವ ಶುದ್ಧ ಮೃಣ್ಮಯ ವಿಗ್ರಹವನ್ನು ವೈಭವೋಪೇತವಾಗಿ ಅಲಂಕರಿಸಿ ಶಾಸ್ತ್ರೋಕ್ತ ರೀತಿಯಲ್ಲಿ ಗೌರಿ ಮತ್ತು ಗಣಪರಿಗೆ ಪೂಜೆ ಸಲ್ಲಿಸಿದರು.. ಪ್ರತಿ ವರ್ಷ ವೈವಿಧ್ಯವಾಗಿ ಮಂಟಪ ರಚಿಸುವ ಮೀರಾ ಕುಮಾರ್ ಈ ಬಾರಿ ಸಮಸ್ತ ಭಾರತೀಯರ ಹೆಮ್ಮೆ ಇಸ್ರೋ ವಿಜ್ಞಾನಿಗಳ ಅಭೂತಪೂರ್ವ ಸಾಧನೆ ಚಂದ್ರಯಾನ ನೌಕೆ ಇಳಿದ ಜಾಗ ‘ಶಿವಶಕ್ತಿ’ ಮಾದರಿಯಲ್ಲಿ ಕಲಾನೈಪುಣ್ಯತೆಯಿಂದ ಕೂಡಿದ ವೇದಿಕೆ ಮಾಡಿ ಕಾಮಧೇನು ಮೇಲೆ ಕುಳಿತ ಗೌರಿಯನ್ನು ಸಿಂಗರಿಸಿ ಪೂಜಿಸಿದ್ದಾರೆ.
ಗಣೇಶ ಆರತಿಯಲ್ಲಿ ನಾಡಿನ ಸಾಂಸ್ಕೃತಿಕ ಲೋಕದ ಗಣ್ಯರಾದ ಮಾಜಿ ಸಚಿವೆ ರಾಣಿ ಸತೀಶ್, ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ , ಬೆಂಗಳೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಿ.ಮಹೇಂದ್ರ , ಹಂಸ ಜ್ಯೋತಿ ಟ್ರಸ್ಟ್ ನ ಕಲಾಸಂಘಟಕ ಎಂ.ಮುರಳಿಧರ, ಹಿರಿಯ ಕಲಾವಿದ ಡಾ.ಕೆಂಚನೂರು ಶಂಕರ್ , ಅಂಕಣಕಾರ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಮೊದಲಾದವರು ಭಾಗವಹಿಸಿದ್ದರು.
ಮೀರಾ ಅವರ ವರ್ಣ ಸಂಯೋಜನೆ ಹಾಗೂ ಸೂಕ್ಷ್ಮ ಕುಸುರಿ ಕಲೆೆಯಿಂದ ಗಮನ ಸೆಳೆಯುವ ಮೈಸೂರು ಚಿತ್ರಕಲೆ, ಭಾರತೀಯ ಸಾಂಪ್ರದಾಯಿಕ ಚಿತ್ರಕಲೆಯಲ್ಲೇ ಒಂದು ವಿಶಿಷ್ಟ ಪ್ರಕಾರವಾದ ಈ ಶೈಲಿ ನೋಡುಗರಿಗೆ ಒಂದು ತ್ರಿ ಆಯಾಮದ ಅನುಭವ ನೀಡುತ್ತದೆ . ಕಲೆ, ಕೌಶಲ, ಭಕ್ತಿ ಮತ್ತು ವೈಭವಗಳ ಒಟ್ಟು ಮೊತ್ತವೇ ಆಗಿರುವ ಈ ಪ್ರಕಾರದ ಚಿತ್ರ ರಚನೆ
ಸುಲಭದ ವಿಷಯವಲ್ಲ ಎನ್ನುವ ಚಿತ್ರ ಕಲಾವಿದೆ ಮೀರಾಕುಮಾರ್, ಬೆಂಗಳೂರು ಕಲಾಮಂದಿರ ಸ್ಕೂಲ್ ಆಫ್ ಆರ್ಟ್ ಮೂಲಕ ಫೈನ್ ಆರ್ಟ್ ಡಿಪ್ಲೊಮಾ ಪಡೆದ ಕಲಾತಪಸ್ವಿ.
ಇವರ ಚಿತ್ರಗಳಲ್ಲಿ ಕಂಡು ಬರುವ ಹಿನ್ನೆಲೆಯ ‘ಪರದೆ’ ಚಿತ್ರಕ್ಕೊಂದು ಮೆರೆಗು ನೀಡುತ್ತದೆ. ರಾಜ್ಯ ಮಟ್ಟದ 25 , ರಾಷ್ಟ್ರಮಟ್ಟದ 10, ಅಂತರಾಷ್ಟ್ರೀಯ ಮಟ್ಟದ 5 ಕಲಾಪ್ರದರ್ಶನಗಳಲ್ಲಿ ಪ್ರತ್ಯಕ್ಷ ಭಾಗಿಯಾಗಿರುವುದು ಇವರ ಕಲಾ ಪ್ರೇಮಕ್ಕೆ ಸಾಕ್ಷಿ.
ಕಲೆಯ ಅಧ್ಯಯನಕ್ಕೆ ಲಂಡನ್, ಪ್ಯಾರಿಸ್, ಆಸ್ಟಿçಯಾ ದೇಶಗಳೂ ಸೇರಿದಂತೆ ಅನೇಕ ದೇಶ ವಿದೇಶಗಳ ಪ್ರವಾಸದ ಮೂಲಕ ಅಪರೂಪದ ಕಲಾಕೃತಿಗಳನ್ನು ಸಂಗ್ರಹಿಸಿದ್ದಾರೆ. ಇವರ ಮನೆಯೇ ವಿಶ್ವಂಭರ ಕಲಾದೇಗುಲ.