ಸುದ್ದಿಮೂಲ ವಾರ್ತೆ
ಮೈಸೂರು ಅ.18:ಮಕ್ಕಳ ಅಭಿವೃದ್ಧಿಗೆ ಬೇಕಾದ ಕೆಲಸಗಳನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಲ್ಲಾ ಸೌಲಭ್ಯಗಳನ್ನು ಪೂರೈಸುವ ಜವಾಬ್ದಾರಿ ಮತ್ತು ಆ ಕರ್ತವ್ಯವನ್ನು ನನಗೆ ಸರ್ಕಾರ ವಹಿಸಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.
ಬುಧವಾರ ನಗರದ ಜಗನ್ಮೋಹನ ಅರಮನೆಯಲ್ಲಿ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ – 2023ರ ಅಂಗವಾಗಿ ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲಾ ಮಕ್ಕಳಲ್ಲಿಯೂ ಪ್ರತಿಭೆ ಇದೆ. ಆದರೆ ಅವಕಾಶದ ಕೊರತೆ ಇದೆ. ಆದ್ದರಿಂದ ಕೆಲವೊಮ್ಮೆ ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಲಾಗುವುದಿಲ್ಲ. ಆವರಣದಲ್ಲಿರುವ ಮಕ್ಕಳ ವಸ್ತು ಪ್ರದರ್ಶನವನ್ನು ಗಮನಿಸಿದೆ. ಅತ್ಯಂತ ಆಕರ್ಷಣೆಯವಾದ ವಸ್ತು ಪ್ರದರ್ಶನದಲ್ಲಿ ಮಕ್ಕಳ ಪ್ರತಿಭೆ ಎದ್ದು ತೋರುತ್ತದೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಸಾಧನೆಗೈದ ಪ್ರತಿಭಾವಂತ ಮಕ್ಕಳ ಜೊತೆಯಲ್ಲಿ ಕುಳಿತಿರುವುದು ನನ್ನ ಸೌಭಾಗ್ಯ ಎಂದು ಸಂತಸ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್ ಸಿ ಮಹದೇವಪ್ಪ ಮಾತನಾಡಿ, ಮಕ್ಕಳ ದಸರಾ ಭಾಷಣ ಮಾಡುವುದಕ್ಕಲ್ಲ. ಮಕ್ಕಳ ಪ್ರತಿಭೆ, ಅವರು ಸಂತಸ ಅನುಭವಿಸುವುದನ್ನು ಕಣ್ಣಾರೆ ನೋಡುವುದಕ್ಕಾಗಿ. ಇಲ್ಲಿರುವ ಪ್ರತಿಭಾನ್ವಿತ ಮಕ್ಕಳನ್ನು ನೋಡಿ ತಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ಎಲ್ಲ ಮಕ್ಕಳಿಗೂ ದಸರಾ ಹಬ್ಬದ ಶುಭವನ್ನು ಹಾರೈಸಿದರು. ಇಂದಿನ ಮಕ್ಕಳ ಬೌದ್ಧಿಕ ಬೆಳವಣಿಗೆ ಹಾಗೂ ಅವರಲ್ಲಿರುವ ಪ್ರತಿಭೆ ನಮಗಿಂತ ಹೆಚ್ಚಿನದ್ದಾಗಿದೆ. ಎರಡು ದಿನಗಳ ಕಾಲ ನಡೆಯಲಿರುವ ಈ ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಎಲ್ಲ ಮಕ್ಕಳು ವೇದಿಕೆಯನ್ನು ಚೆನ್ನಾಗಿ ಬಳಸಿಕೊಳ್ಳಿ ಮತ್ತು ಸಂತಸಪಡಿ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಮೇಯರ್ ಶಿವಕುಮಾರ್ ಮಾತನಾಡಿ, ದಸರಾ ಮಹೋತ್ಸವದಲ್ಲಿ ಮಕ್ಕಳ ದಸರಾ ವನ್ನು 2007 ಮಾಡಲಾಯಿತು. ಮಕ್ಕಳ ಸಂತೋಷವನ್ನು ಹೆಚ್ಚಿಸುವುದಕ್ಕಾಗಿ ಮೈಸೂರು ದಸರಾ ಮಹೋತ್ಸವದಲ್ಲೂ ಅವಕಾಶ ಕಲ್ಪಿಸಲಾಗಿದೆ. ಮಕ್ಕಳ ದಸರಾ ವೇದಿಕೆಯು ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ ಎಂದರು.
ಬಾಲ ಪ್ರತಿಭೆಗಳಿಗೆ ಚೆಕ್
ಸರಿಗಮಪ ಸೀಸನ್ 19ರ ದಿಯಾ ಹೆಗಡೆ ಪ್ರಗತಿ ಬಡಿಗೇರ್ ರಾಜ್ಯಮಟ್ಟದ ಸೋಲು ಡಾನ್ಸು ವಿಜೇತ ಗಂಗಾಧರ್ ಜಿಎಂ ಹಾಗೂ ಖೋ-ಖೋ ರಾಷ್ಟ್ರೀಯ ಕ್ರೀಡಾಪಟು ಮಾನಸ ಬಾಲ ಪ್ರತಿಭೆಗಳಿಗೆ ಸಚಿವರುಗಳು ಗೌರವ ಸಮರ್ಪಣೆ ಮಾಡಿ, ಚೆಕ್ ವಿತರಿಸಿದರು.
ಉಪ ಮೇಯರ್ ಡಾ. ಜಿ. ರೂಪ, ನಗರಪಾಲಿಕೆ ಸದಸ್ಯೆ ಪರಿಮಳ ಭರತ್, ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯ ವಿಶೇಷಾಧಿಕಾರಿಗಳು ಹಾಗೂ ಹುಣಸೂರು ಉಪವಿಭಾಗಾಧಿಕಾರಿ ರುಚಿ ಬಿಂದಾಲ್, ಅಧ್ಯಕ್ಷರಾದ ಸುಧಾ ಮಹದೇವಯ್ಯ, ಸರಿಗಮಪ ಖ್ಯಾತಿಯ ಪ್ರಗತಿ ಬಡಿಗೇರ್, ದಿಯಾ ಹೆಗ್ಡೆ, ರಾಜ್ಯಮಟ್ಟದ ಸೋಲೋ ಡಾನ್ಸ್ ವಿಜೇತ ಗಂಗಾಧರ ಜಿ.ಎಂ, ಖೋ-ಖೋ ರಾಷ್ಟ್ರೀಯ ಕ್ರೀಡಾಪಟು ಮಾನಸ ಸೇರಿದಂತೆ ವಿವಿಧ ಶಾಲೆಯಿಂದ ಮಕ್ಕಳು ಭಾಗವಹಿಸಿದ್ದರು.