ಸುದ್ದಿಮೂಲ ವಾರ್ತೆ
ಮೈಸೂರು, ಜೂ.11:ಜಿಲ್ಲೆಯ ಎಚ್.ಡಿ.ಕೋಟೆಯ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಮೀನಿನ ಬಲೆಗಳು ವನ್ಯಜೀವಿಗಳ ಪಾಲಿಗೆ ಕಂಟಕವಾಗಿ ಪರಿಣಮಿಸಿವೆ.
ಇತ್ತೀಚೆಗೆ ಜಿಂಕೆಯ ಕೊಂಬಿಗೆ ಮೀನಿನ ಬಲೆ ಸುತ್ತಿಕೊಂಡು ಪರದಾಡುತ್ತಿರುವ ದೃಶ್ಯ ಕಂಡು ಬಂದಿದೆ. ನೀರು ಕಡಿಮೆಯಾದಾಗ ಮೀನಿನ ಬಲೆ ದಡದಲ್ಲಿಯೇ ಉಳಿದಿರುತ್ತದೆ. ಜತೆಗೆ ಮೀನು ಹಿಡಿಯುವಾಗ ಅರಣ್ಯ ಸಿಬ್ಬಂದಿಯ ಕಾರ್ಯಾಚರಣೆಗೂ ಹೆದರಿ ಬಲೆಗಳನ್ನು ಅಲ್ಲಿಯೇ ಬಿಟ್ಟು ಓಡಿಹೋಗಿರುತ್ತಾರೆ.. ಕಬಿನಿ ಹಿನ್ನೀರಿಗೆ ನೀರು ಕುಡಿಯಲು ಬರುವ ಹಲವು ವನ್ಯಜೀವಿಗಳು ನೆಲದ ಮೇಲೆ ಬಿದ್ದಿರುವ ಬಲೆಯನ್ನು ಗಮನಿಸದೆ ತುಳಿಯುತ್ತವೆ. ಅದನ್ನು ಕೊಂಬಿನಿಂದ ಬಿಡಿಸಿಕೊಳ್ಳಲು ಹೋಗಿ ಸಿಕ್ಕಿಸಿಕೊಳ್ಳುತ್ತವೆ. ಇದರಿಂದ ಅವುಗಳ ಸಹಜ ಜೀವನಕ್ಕೆ ತೊಂದರೆಯಾಗುತ್ತದೆ. ಆದ್ದರಿಂದ ಬಲೆಯನ್ನು ಜಿಂಕೆ ಕೊಂಬಿನಿಂದ ಬಿಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಬೇಕು ಎಂದು ವನ್ಯಜೀವಿ ತಜ್ಞರು ಆಗ್ರಹಿಸಿದ್ದಾರೆ.