ಸುದ್ದಿಮೂಲ ವಾರ್ತೆ
ಮೈಸೂರು,ಸೆ.6:ಎಲ್ಲರಿಗೂ ಎಲ್ಲೆಡೆ ಶಿಕ್ಷಣ ನೀಡುವ ಘನೋದ್ದೇಶ ಹೊಂದಿರುವ ಇಲ್ಲಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಮತ್ತು ಶತಮಾನದ ಭವ್ಯ ಇತಿಹಾಸ ಹೊಂದಿರುವ ಮೈಸೂರು ವಿಶ್ವವಿದ್ಯಾಲಯದಲ್ಲಿ ದಿನೇ ದಿನೇ ಶೈಕ್ಷಣಿಕ ವಾತಾವರಣ ಹದಗೆಡುತ್ತಿದೆ.
ಇದಕ್ಕೆ ಉದಾಹರಣೆ ಮೈಸೂರು ವಿವಿ ಆಡಳಿತಕ್ಕೆ ಒಳಪಟ್ಟಿರುವ ಮಾನಸಗಂಗೋತ್ರಿಯ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಅಧ್ಯಾಪಕರ ನಡುವೆ ಸಾಮರಸ್ಯದ ಕೊರತೆಯಿಂದಾಗಿ ವಿದ್ಯಾರ್ಥಿಗಳು ಕಾರಿಡಾರ್ ನಲ್ಲೇ ಪಾಠ ಕೇಳುವ ದುಸ್ಥಿತಿ ನಿರ್ಮಾಣವಾಗಿದ್ದರೆ, ಮುಕ್ತ ವಿವಿಯಲ್ಲಿ ಅಧ್ಯಾಪಕರೊಬ್ಬರು, ವ್ಯವಸ್ಥಾಪನ ಮಂಡಲಿ ನಿರ್ಣಯವನ್ನು ಬಹಿರಂಗಪಡಿಸಲಿಲ್ಲ ಎಂದು ವಿವಿ ಆಡಳಿತ ಕಚೇರಿಯಲ್ಲಿ ಏಕಾಂಕಿಯಾಗಿ ಪ್ರತಿಭಟನೆ ಮಾಡಿದ್ದಾರೆ.
ಅಲ್ಲದೇ, ಇತ್ತೀಚೆಗೆ ವಿಶ್ವವಿದ್ಯಾಲಯಗಳಲ್ಲಿ ಭ್ರಷ್ಟಾಚಾರದ ದಟ್ಟ ವಾಸನೆ ಇತ್ತು. ಈಗ ದುರ್ವಾಸನೆ ಮಾರ್ಪಟ್ಟಿದೆ. 2 ವಿವಿಗಳಲ್ಲೂ ಅಡಳಿತ ಮಂಡಲಿ ಮತ್ತು ಅಧ್ಯಾಪಕರ ನಡುವೆ ಪರಸ್ಪರ ಹೊಂದಾಣಿಕೆ ಕೊರತೆ ಹೆಚ್ಚಾಗುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಮೈಸೂರು ವಿವಿಯಲ್ಲಿ ಕುಲಪತಿಗಳಲ್ಲದೇ ಯಾವುದೇ ಪ್ರಮುಖ ಶೈಕ್ಷಣಿಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಕುಲಗೆಟ್ಟು ಹೋಗಿದೆ. ಇನ್ನೂ ಮುಕ್ತ ವಿವಿ ಬಗ್ಗೆ ಹೇಳುವಂತೆಯೇ ಇಲ್ಲ ಎಂಬ ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಲಾಗುತ್ತಿದೆ.
ಈ ವಿವಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದ್ದ ಖ್ಯಾತಿ ಈಗ ಇಲ್ಲವಾಗುತ್ತಿದೆ. ಕೂಡಲೇ ಇದೇ ಜಿಲ್ಲೆಯವರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗಮನಹರಿಸಬೇಕು. ಇತ್ತೀಚೆಗೆ ಸಿದ್ದರಾಮಯ್ಯ ವಿವಿ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿ, ವಿವಿಗಳ ಪಾವಿತ್ರತೆ ರಕ್ಷಣೆ ಮಾಡುವ ಭರವಸೆ ನೀಡಿದ್ದಾರೆ.
ಮೈಸೂರು ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗವನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸುವ ವಿಷಯಕ್ಕೆ ಸಂಬಂಧಿಸಿದಂತೆ ವಿಭಾಗದ ಅಧ್ಯಾಪಕರ ನಡುವೆ ಪ್ರತಿಷ್ಠೆಯಿಂದಾಗಿ ಜಟಾಪಟಿ ನಡೆದು, ಅಂತಿಮವಾಗಿ ಗಂಡ ಹೆಂಡತಿಯರ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ವಿದ್ಯಾರ್ಥಿಗಳು ಕಾರಿಡಾರ್ ನೆಲದಲ್ಲೇ ಪಾಠ ಕೇಳಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಕಾರಣ
ಪತ್ರಿಕೋದ್ಯಮ ವಿಭಾಗದ ಪಾಠ ಪ್ರವಚನಗಳು ಮಾನವಿಕ ಕಟ್ಟಡದಲ್ಲಿ 5 ದಶಕಗಳಿಂದ ನಡೆದುಕೊಂಡು ಬರುತ್ತಿದ್ದು, ಇಲ್ಲಿ ವಿಭಾಗದ ಮುಖ್ಯಸ್ಥರು, ಅಧ್ಯಾಪಕರ ಕೊಠಡಿ, ಸ್ಟೂಡಿಯೋ ಇದೆ. ಕೆಲ ವರ್ಷಗಳ ಹಿಂದೆ ವಿಶ್ವವಿದ್ಯಾನಿಲಯದ ಶತಮಾನೋತ್ಸವದ ಅಂಗವಾಗಿ ಕೆಲ ವಿಭಾಗಗಳಿಗೆ ಸ್ವಂತ ಕಟ್ಟಡ ನಿರ್ಮಿಸುವ ಯೋಜನೆ ರೂಪಿಸಲಾಯಿತು. ಈ ಪೈಕಿ ಪತ್ರಿಕೋದ್ಯಮ ವಿಭಾಗಕ್ಕೂ ಬಯೋಕೆಮಿಷ್ಟ್ರಿ ವಿಭಾಗದ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇಲ್ಲಿಗೆ ಸೌಲಭ್ಯಗಳ ಮತ್ತು ಅನುದಾನದ ಕೊರತೆಯಿಂದಾಗಿ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಿರಲಿಲ್ಲ.
ಈ ಮಧ್ಯೆ ಈ ಶೈಕ್ಷಣಿಕ ವರ್ಷದಿಂದ ಹೊಸ ಕಟ್ಟಡದಲ್ಲಿಯೇ ಪತ್ರಿಕೋದ್ಯಮ ವಿಭಾಗದ ಚಟುವಟಿಕೆಗಳು ಮುಂದುವರಿಯಬೇಕು. ಹಾಗಾಗಿ, ಸ್ಥಳಾಂತರಿಸಿ ಎಂದು ವಿಶ್ವವಿದ್ಯಾನಿಲಯದ ಆಡಳಿತದಿಂದ ಸೂಚನೆ ಬಂದಿತ್ತು. ಈ ಹಿನ್ನೆಯಲ್ಲಿ ಸ್ಥಳಾಂತರ ಮಾಡಲಾಗಿತ್ತು. ಇದಕ್ಕೆ ಅಧ್ಯಾಪಕರು ಆಕ್ಷೇಪ ವ್ಯಕ್ತಪಡಿಸಿದ್ದರು.
ಪತ್ರಿಕೋದ್ಯಮ ವಿಭಾಗವನ್ನು ರಾತ್ರೋರಾತ್ರಿ ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ. ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಎಸ್.ಸಪ್ನಾ ಕಟ್ಟಡ ‘ಸ್ಥಳಾಂತರ ಮಾಡಲಾಗಿದೆ’ ಎಂದು ಬಾಗಿಲಿಗೆ ಚೀಟಿ ಅಂಟಿಸಿ ಹೋಗಿದ್ದಾರೆ. ನಮಗೆ ಮಾಹಿತಿಯೇ ಇಲ್ಲ ಎಂಬ ಅಸಮಾಧಾನವನ್ನು ಅಧ್ಯಾಪಕರು ವ್ಯಕ್ತಪಡಿಸಿದ್ದರು.
ಈ ಕಟ್ಟಡದಲ್ಲಿ ಉಳಿದುಕೊಂಡಿರುವ ಪ್ರೊ. ಸಿ.ಕೆ. ಪುಟ್ಟಸ್ವಾಮಿ ಹಾಗೂ ಎನ್. ಮಮತ ಅವರು, ನಮಗೆ ವಿಭಾಗ ಬದಲಾಗಿರುವ ಬಗ್ಗೆ ಮೈಸೂರು ವಿವಿಯಿಂದ ಅಧಿಕೃತ ಆದೇಶ ಬಂದಿಲ್ಲ. ಇದರಿಂದ ನಾವು ಇಲ್ಲಿ ಉಳಿದುಕೊಂಡಿದ್ದೇವೆ ಎಂದು ಹೇಳುತ್ತಾರೆ.
ಹೀಗೆ ಪ್ರಾಧ್ಯಾಪಕರ ನಡುವಿನ ಜಟಾಪಟಿ ಪರಿಣಾಮ ಹೊಸ ಕಟ್ಟಡಕ್ಕೆ ಹೋಗದೇ, ಹಳೆ ಕಟ್ಟಡದ ತರಗತಿಯ ಕೊಠಡಿಗಳಿಗೆ ಬೀಗ ಹಾಕಿರುವ ಪರಿಣಾಮವಾಗಿ ಕಾರಿಡಾರ್ ನಲ್ಲಿ ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡಲಾಗುತ್ತಿದೆ.
ಅಧ್ಯಕ್ಷರ ಸ್ಪಷ್ಟನೆ
ಈ ಕುರಿತು ಸ್ಪಷ್ಟನೆ ನೀಡುರುವ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಎಸ್.ಸಪ್ನಾ, ಇದು ನನ್ನ ವೈಯಕ್ತಿಕ ನಿರ್ಧಾರವಲ್ಲ. ವಿವಿ ಆಡಳಿತಾಂಗದ ಆದೇಶದಂತೆ ನಿರ್ಧಾರ ಕೈಗೊಳ್ಳಲಾಗಿದೆ. ಈ ವಿಷಯವನ್ನು ಎಲ್ಲರಿಗೂ ತಿಳಿಸಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದಲೇ ಮಾಡಲಾಗಿದೆಯೇ ಹೊರತು ಬೇರೆನೂ ಇಲ್ಲ ಎಂದು ಹೇಳಿದ್ದಾರೆ.
ಏಕಾಂಗಿ ಪ್ರತಿಭಟನೆ
ರಾಜ್ಯಪಾಲರು, ಸರ್ಕಾರ ಸ್ಪಷ್ಟ ಆದೇಶವಿದ್ದರೂ ಮುಕ್ತ ವಿವಿ ವ್ಯವಸ್ಥಾಪನ ಮಂಡಳಿ (ಬಿಓಎಂ) ನಿರ್ಣಯವನ್ನು ಸಭೆ ಮುಗಿದು ತಿಂಗಳುಗಳೇ ಕಳೆದರು ಅದನ್ನು ಬಹಿರಂಗ ಪಡಿಸಿಲ್ಲ. ಹೀಗಾಗಿ, ಕರಾಮುವಿ ಕಛೇರಿ ಮುಂಭಾಗ ಖಾಯಂ ಶಿಕ್ಷಕ ಸಂಘದ ಕಾರ್ಯದರ್ಶಿ ಪ್ರೊ.ಜಗದೀಶ್ ಬಾಬು ಕಚೇರಿ ಒಳಗೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.
ಇದಲ್ಲದೇ, ವಿವಿ ಹಣಕಾಸನ್ನು ವೈರ್ಥವಾಗಿ ವೆಚ್ಚ ಮಾಡಲಾಗುತ್ತಿದೆ ಎಂದು ಇಲ್ಲಿನ ಅಧ್ಯಾಪಕರು ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿದ್ದರು. ಒಟ್ಟಾರೆಯಾಗಿ ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದ್ದು ವಿವಿಯ ಕುಲಪತಿಗಳು ಹಾಗೂ ಕುಲಸಚಿವ ಆಡಳಿತದ ವೈಖರಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.