ಸುದ್ದಿಮೂಲ ವಾರ್ತೆ
ಬೆಂಗಳೂರು,ಅ.27:ಜ್ಯುವೆಲ್ಸ್ ಆಫ್ ಇಂಡಿಯಾದಿಂದ ಅಕ್ಟೋಬರ್ 27 ರಿಂದ 30 ರ ವರೆಗೆ ಭಾರತದ ಅತಿ ದೊಡ್ಡ ಅಂದ – ಚಂದದ “ಜ್ಯುವೆಲ್ಸ್ ಆಫ್ ಇಂಡಿಯಾ – 2023 ಆಭರಣ ಮೇಳ ಆರಂಭವಾಗಿದ್ದು, ಆಭರಣ ಪ್ರಿಯರ ಕಣ್ಮನ ಸೆಳೆಯುತ್ತಿದೆ.
ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್ ಆವರಣದಲ್ಲಿ ಆಭರಣ ಮೇಳದ ರಾಯಭಾರಿ ಬಾಲಿವುಡ್ ನಟಿ ತಮ್ಮನ್ನಾ ಭಾಟಿಯಾ ಆಭರಣ ಮೇಳ ಉದ್ಘಾಟಿಸಿದರು. ವಿಧಾನಪರಿಷತ್ ಸದಸ್ಯ ಡಾ.ಟಿ.ಎ.ಶರವಣ, ಕಾರ್ಯಕ್ರಮದ ಆಯೋಜಕರಾದ ವಿಕ್ರಮ್ ಮೆಹ್ತಾ ಮತ್ತಿತರರು ಉಪಸ್ಥಿತರಿದ್ದರು.
ದೇಶಾದ್ಯಂತದ 120 ಮಳಿಗೆಗಳು ಈ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದು, ಇದು ಜ್ಯುವೆಲ್ಸ್ ಆಫ್ ಇಂಡಿಯಾದ 25ನೇ ಬೆಳ್ಳಿ ಮಹೋತ್ಸವವಾಗಿದೆ. ಈ ಬಾರಿ ತಮ್ಮನ್ನಾ ಭಾಟಿಯಾ ಟ್ರೆಂಡಿ ಆಭರಣಗಳನ್ನು ಧರಿಸಿ ಸಂಭ್ರಮಿಸಿದರು.
ವೈವಿಧ್ಯಮಯ ವಿನ್ಯಾಸ, ಆಕರ್ಷಕ ಕುಸುರಿ, ಯುವ ಸಮೂಹವನ್ನು ಸೆಳೆಯುವ ನವನವೀನ, ಮನಮೋಹಕ ಬ್ರ್ಯಾಂಡ್ ಆಭರಣಗಳನ್ನು ಈ ಬಾರಿ ಪ್ರದರ್ಶಿಸುತ್ತಿದ್ದು, ಆಭರಣ ಪ್ರಿಯರು, ಅದರಲ್ಲೂ ವಿಶೇಷವಾಗಿ ಮಹಿಳೆಯರನ್ನು ಮೇಳ ಸೆಳೆಯುತ್ತಿದೆ. ನವರಾತ್ರಿ ಹಾಗೂ ದೀಪಾವಳಿ ಹಬ್ಬಗಳಿಗೆ ಆಭರಣ ಮೇಳ ಮೆರಗು ತರಲಿದ್ದು ಆಭರಣ ಖರೀದಿದಾರರಿಗೆ ಸಂಭ್ರಮ ಹೆಚ್ಚಿಸಿದೆ.
ಹಬ್ಬಗಳಿಗೆ ಚೆಂದದ ಆಭರಣಗಳನ್ನು ಖರೀದಿಸಲು ಬಯಸುವ ಮಹಿಳೆಯರಿಗೆ ಈ ಮೇಳದಲ್ಲಿ ಒಂದೇ ಸೂರಿನಡಿ ಸಹಸ್ರಾರು ವಿನ್ಯಾಸದ ಚಿನ್ನ ಮತ್ತು ವಜ್ರದ ಆಭರಣಗಳು ದೊರಕಲಿವೆ. ದೇಶದ ವಿವಿಧ ಭಾಗಗಳ ವರ್ಣರಂಜಿತ ಆಭರಣ ಇಲ್ಲಿ ಲಭ್ಯವಿದೆ. ಪ್ರತಿಯೊಬ್ಬರ ಮನಸೂರೆಗೊಳ್ಳುವ ಆಭರಣ ಕಡಿಮೆ ದರದಿಂದ 5 ಕೋಟಿ ರೂ.ವರೆಗೆ ದೊರೆಯಲಿದೆ.
ಜೈಪುರದ ಕುಂದನ್ ಮತ್ತು ಮೀನಾಕ್ಷಿ ಆಭರಣಗಳು, ತಮಿಳುನಾಡಿನ ಪ್ರಾಚೀನ ವಿನ್ಯಾಸದ ಆಭರಣಗಳು, ರಾಜಾಸ್ಥಾನದ ವಿನೂತನ ಥೇವಾ ಮಾಧರಿಯ ಆಭರಣಗಳು, ಮುಂಬೈನ ಹೊಸ ವಿನ್ಯಾಸದ ಮತ್ತು ಬ್ರಾಂಡೆಡ್ ವಜ್ರಾಭರಣಗಳು, ಕೊಲ್ಕೊತ್ತಾದ ಕರಕುಶಲ ಮತ್ತು ಸೂಕ್ಷ್ಮ ವಿನ್ಯಾಸದ ಆಭರಣಗಳು, ಮೂಲ ಬರ್ಮಾ ರೂಬಿ ಹರಳುಗಳು, ಗುಜರಾತಿ ಶೈಲಿಯ ಚಿನ್ನಾಭರಣಗಳು, ದಕ್ಷಿಣ ಭಾರತದ ಸಾಂಪ್ರದಾಯಿಕ ಆಭರಣಗಳು, ಮದುಮಗಳ ಅಲಂಕಾರಿಕ ಆಭರಣಗಳು, ಅಪರೂಪದ ಬಳೆಗಳ ಸಂಗ್ರಹ, ಫ್ಯೂಷನ್ ಆಭರಣಗಳು, ಪುರುಷರ ಆಭರಣಗಳು, ವಿಧದ ಹರಳು ಕಲ್ಲುಗಳು ಪ್ರದರ್ಶನ ಮಳಿಗೆಗಳಲ್ಲಿ ಲಭ್ಯವಿದೆ.
ತಮ್ಮನ್ನಾ ಭಾಟಿಯಾ ಮಾತನಾಡಿ, ಬೆಂಗಳೂರುನಗರ ಗಾರ್ಡನ್ ಸಿಟಿ ಜೊತೆಯಲ್ಲಿ ಗೋಲ್ಡನ್ ಸಿಟಿ ಎಂದು ಖ್ಯಾತಿ ಗಳಿಸಿದೆ. ಮಹಿಳೆಯರಿಗೆ ಚಿನ್ನಾಭರಣ ಎಂದರೆ ಎಲ್ಲಿಲ್ಲದ ಪ್ರೀತಿ, ಇಂತಹ ಮೇಳದಲ್ಲಿ ಗ್ರಾಹಕರು ತಮಗೆ ಇಷ್ಟವಾದ ಅಭರಣ ಖರೀದಿಸಿ, ಸಂತಸಪಡಬೇಕು ಎಂದು ಹೇಳಿದರು ಆಭರಣ ಪ್ರದರ್ಶನದ ಆಯೋಜಕರಾದ ವಿಕ್ರಮ್ ಮೆಹ್ತಾ ಮಾತನಾಡಿ, ದೇಶದ ವಿವಿಧ ಭಾಗಗಳ ಸಾಂಪ್ರದಾಯಿಕ ಮತ್ತು ನವೀನ ವಿನ್ಯಾಸದ ಆಭರಣಗಳ ಖರೀದಿಗೆ ಈ ಪ್ರದರ್ಶನ ವೇದಿಕೆಯಾಗಿದೆ. ಈ ಆಭರಣ ಪ್ರದರ್ಶನ ಎಲ್ಲರ ಅಭಿರುಚಿ, ಬಜೆಟ್ಗೆ ಅನುಗುಣವಾಗಿ ದೊರೆಯಲಿದೆ ಎಂದರು.