ಸುದ್ದಿಮೂಲ ವಾರ್ತೆ
ಕುಷ್ಟಗಿ,ಜೂ. 08: ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ಕಳೆದ ಏಳು ದಿನಗಳಿಂದ ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿ ಚಿಕಿತ್ಸೆಗೆ ದಾಖಲಾಗಿದ್ದವರ ಪೈಕಿ ಒಬ್ಬ ಬಾಲಕಿ ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದಾಳೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಬಿಜಕಲ್ ಗ್ರಾಮದ 9 ವರ್ಷದ ನಿರ್ಮಲಾ ತಂದಿ ವೀರಪ್ಪ ನೀರಲೂಟಿ ಮೃತಪಟ್ಟ ಬಾಲಕಿ ಎಂದು ಗುರುತಿಸಲಾಗಿದೆ.
ಮೃತಳ ತಂದೆ-ತಾಯಿ ಕೇರಳಕ್ಕೆ ದುಡಿಮೆ ಅರಸಿ ಗುಳೇ ಹೋಗಿದ್ದಾರೆ. ಅತ್ತೆ ಹನುಮವ್ವ ಜೊತೆಗೆ ಬಿಜಕಲ್ ಗ್ರಾಮದಲ್ಲಿ ನೆಲೆಸಿದ್ದ ಬಾಲಕಿ, ಹೆಸರೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ 3ನೇ ತರಗತಿ ಓದುತಿದ್ದಳು. ಗ್ರಾಮದಲ್ಲಿ ಬುಧವಾರ ರಾತ್ರಿ ಕಲುಷಿತ ನೀರು ಸೇವಿಸಿ ಏಕಾಏಕಿ ವಾಂತಿ – ಬೇಧಿಗೆ ಒಳಗಾಗಿ ತೀವ್ರ ಅಸ್ವಸ್ಥಳಾದ ಬಾಲಕಿಯನ್ನು ಚಿಕಿತ್ಸೆ ಕೊಡಿಸಲು ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಗೆ ಬಾಲಕಿ ಅತ್ತೆ ಹನುಮವ್ವ ಭರಮಣ್ಣವರ ದಾಖಲಿಸಿದ್ದಾಳೆ. ಆದರೆ, ವೈದ್ಯ ಸಿಬ್ಬಂದಿ ನೀಡಿದ ಚಿಕಿತ್ಸೆ ಫಲಿಸದೇ ಬಾಲಕಿ ಬೆಳಿಗ್ಗೆ ಹಸುನೀಗಿದ್ದಾಳೆ ಎಂದು ಆಸ್ಪತ್ರೆ ಮೂಲಗಳು ಸ್ಪಷ್ಟಪಡಿಸಿವೆ.
ಈಗಾಗಲೇ ಬಿಜಕಲ್ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವಾಂತಿ-ಬೇಧಿಯಿಂದ 50ಕ್ಕೂ ಹೆಚ್ಚು ಗ್ರಾಮಸ್ಥರು ಸರ್ಕಾರಿ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.