ಸುದ್ದಿಮೂಲ ವಾರ್ತೆ
ತುಮಕೂರು, ನ.27: ಕಲೆ, ಸಂಸ್ಕೃತಿಗಳ ಪರಿಚಯದಿಂದ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯವಾಗುತ್ತದೆ. ಇಂತಹ ಅಮೂಲ್ಯ ಕಲೆಗಳನ್ನು ಇಂದಿನ ಪೀಳಿಗೆಯ ಯುವ ಜನರಿಗೆ ಹೆಚ್ಚು ಹೆಚ್ಚು ಪರಿಚಯಿಸಿದಲ್ಲಿ ಸಮಾಜದಲ್ಲಿ ಉತ್ತಮವಾದುದನ್ನು ನಾವು ನಿರೀಕ್ಷಿಸಬಹುದಾಗಿದೆ ಎಂದು ಸ್ವಾಂದೇನಹಳ್ಳಿ ಗ್ರಾಮ ಪಂಚಾಯ್ತಿಯ ಅಭಿವೃದ್ಧಿ ಅಧಿಕಾರಿ ಹೆಚ್.ಸಿ ಕೃಷ್ಣಮೂರ್ತಿ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಶೇಷ ಘಟಕ ಯೋಜನೆಯಡಿ ಸ್ವಾಂದೇನಹಳ್ಳಿ ಗ್ರಾಮದ ಶ್ರೀರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ಏರ್ಪಡಿಸಿದ್ದ “ಜನಪರ ಉತ್ಸವ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾಂಸ್ಕೃತಿಕ ಕಲೆಗಳಲ್ಲಿ ಆಸಕ್ತಿ ಹೊಂದಿರುವವರು ಶೈಕ್ಷಣಿಕವಾಗಿ ಹೆಚ್ಚಿನ ಸಾಧನೆ ಮಾಡುತ್ತಾರೆ ಹಾಗೂ ಇವರು ತಮ್ಮ ವ್ಯಕ್ತಿತ್ವದಲ್ಲಿ ಉತ್ತಮರಾಗಿದ್ದು ಸಮಾಜದ ಬಗ್ಗೆ ಹೆಚ್ಚಿನ ಕಾಳಜಿ ಮತ್ತು ಕಳಕಳಿ ಹೊಂದಿರುತ್ತಾರೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹಾಲಕ್ಷ್ಮೀ ಆರ್. ಮಾತನಾಡಿ, ನಮ್ಮ ಗ್ರಾಮೀಣ ಪರಿಸರದ ಕಲೆ, ಸಂಗೀತ, ಸಾಹಿತ್ಯವನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಅತ್ಯಾವಶ್ಯಕವಾಗಿ ಬೇಕಾಗಿರುತ್ತದೆ. ಇಂದಿನ ಪೀಳಿಗೆಯ ಯುವಕರು ಮೊಬೈಲ್ ಜಾಲಕ್ಕೆ ಸಿಲುಕಿ ತಮ್ಮ ಸ್ವಂತಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂತಹ ಕಾರ್ಯಕ್ರಮಗಳನ್ನು ಇನ್ನಷ್ಟು ಪ್ರಮಾಣದಲ್ಲಿ ಏರ್ಪಡಿಸಿದಲ್ಲಿ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಬಹಳಷ್ಟು ಹಿಂದಿನ ಕಾಲದಿಂದಲೂ ಕಲೆ, ಸಂಸ್ಕೃತಿ, ಸಂಭ್ರಮವನ್ನು ಬಿಂಬಿಸುವ ಜನಪದ ಕಲೆಗಳು ಸರ್ವಕಾಲಕ್ಕೂ ಮನರಂಜನೆಯನ್ನು ನೀಡುತ್ತಾ ಬಂದಿದ್ದು, ನಮ್ಮ ನಾಡಿನ ಭವ್ಯ ಪರಂಪರೆಯನ್ನು ಇವು ಎತ್ತಿ ಹಿಡಿಯುತ್ತಾ ಬಂದಿವೆ. ಇಂತಹ ಕಲೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವನ್ನು ಸರ್ಕಾರ ಮಾಡುತ್ತಾ ಬಂದಿದ್ದು, ಇದಕ್ಕೆ ನಾವೆಲ್ಲರೂ ಕೈ ಜೋಡಿಸ ಬೇಕು ಎಂದು ಕರೆ ನೀಡಿದರು.