ಸುದ್ದಿಮೂಲ ವಾರ್ತೆ
ಚೇಳೂರು,ನ.22:ಚಿಕ್ಕಬಳ್ಳಾಪುರದ ಚೇಳೂರಿನ ವಡ್ಡಿವಾಂಡ್ಲಪಲ್ಲಿ ಸರ್ಕಾರಿ ಶಾಲೆ ಅಂಗಳ ನಿನ್ನೆ ಸುರಿದ ಧಾರಾಕಾರ ಮಳೆಗೆ ನೀರು ನಿಂತು ಕೆರೆಯಂಗಳದಂತೆ ಮಾರ್ಪಟ್ಟಿದೆ, ಮಳೆ ಬಂದಾಗಲೆಲ್ಲಾ ಇದೆ ಪರಿಸ್ಥಿತಿ. ಪರಿಣಾಮ ಮಕ್ಕಳು ಹಾಗು ಶಿಕ್ಷಕರು ಓಡಾಡಲು ಆಗದೇ ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಲು ಮಕ್ಕಳು ಹಾಗು ಪೋಷಕರು ಮನವಿ ಮಾಡಿದ್ದಾರೆ.
ಅಲ್ಪ ಸ್ವಲ್ಪ ಮಳೆ ಬಂದರು ಶಾಲೆಯ ಮುಂದೆ ನೀರು ನಿಂತುಕೊಳ್ಳುತ್ತವೆ. ಅಂಗಳದಲ್ಲಿ ತಗ್ಗು ಇರುವುದರಿಂದ ನೀರು ಹರಿಯದೆ ಅಲ್ಲೇ ನಿಲ್ಲುವುದರಿಂದ ಸಮಸ್ಯೆಯಾಗಿ ಪರಿಗಣಿಸಿದೆ. ಇದರಿಂದ ಶಾಲೆಯ ಅಧಿಕಾರಿಗಳಾಗಲಿ ಹಾಗೂ ಪಂಚಾಯ್ತಿ ಅಧಿಕಾರಿಗಳಾಗಲಿ ಅಂಗಳದಲ್ಲಿ ಮಣ್ಣು ತುಂಬಿಸಿ ನೀರು ಹರಿಯಲು ಅನುವು ಮಾಡಿಕೊಡಲು ಮಕ್ಕಳು ಮನವಿ ಮಾಡಿದ್ದಾರೆ.
ಈ ಶಾಲೆಯಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳು ಇಲ್ಲದೆ ಮಕ್ಕಳು ಪರದಾಡುತ್ತಿದ್ದಾರೆ. ಶಾಲೆಯಲ್ಲಿ ಒಂದರಿಂದ ಆರನೇ ತರಗತಿಯ ಸುಮಾರು 30 ರಿಂದ 40 ಮಕ್ಕಳು ಇದ್ದು, ಕೆಲ ವರ್ಷಗಳಿಂದ ಮೂಲಭೂತ ಸೌಲಭ್ಯಗಳಿಲ್ಲದೆ ಮಕ್ಕಳು ಗೋಳಾಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಸುಮ್ಮನೆ ಕುಳಿತಿರುವುದು ವಿಪರ್ಯಾಸ. ಸುಮಾರು ದಿನಗಳಿಂದ ಮೇಲಾಧಿಕಾರಿಗಳಿಗೆ ಮೂಲಭೂತ ಸೌಲಭ್ಯಗಳು ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಹುಸಿ ಭರವಸೆಗಳನ್ನು ಕೊಟ್ಟು ಹೋಗುತ್ತಾರೆ ಹೊರೆತು ಕೆಲಸ ಮಾಡಿಕೊಡಲ್ಲ ಎಂದು ಎಸ್ ಡಿ ಎಂಸಿ ಅಧ್ಯಕ್ಷ ನರಸಿಂಹಪ್ಪ ತಿಳಿಸಿದ್ದಾರೆ.