ಸುದ್ದಿಮೂಲವಾರ್ತೆ
ಕೊಪ್ಪಳ,ಆ.19:ಗಿಲ್ಲಿ ದಾಂಡು, ಲಗೋರಿ, ಕುಂಟೆಬಿಲ್ಲೆ, ಆಣೆಕಲ್ಲು, ಬುಗುರಿ, ಕಣ್ಣಾಮುಚ್ಚಾಲೆಯಂತಹ ಗ್ರಾಮೀಣ ಕ್ರೀಡೆಗಳು ಕಣ್ಮನ ಸೆಳೆದವು. ಚಲ್ಲಿದರೂ ಮಲ್ಲಿಗೆಯ. ಅಂದುಳ್ಳ ಅಡಿಗಲ್ಲು.ಏಳಿತಾಲೆ ಎದ್ದು ಯಾರ್ಯಾರ ನೆನೆಯಲಿ ಎಳ್ಳು ಜೀರಿಗೆ ಬೆಳೆಯೋಳ ಭೂಮಿತಾಯಿ ಎದ್ದೊಂದು ಗಳಿಗೆ ನೆನೆದೇನ…., ಘಲ್ಲು ಘಲ್ಲೆನುತಾ ಗೆಜ್ಜೆ….. ಹೀಗೆ ಮೂಲ ಜನಪದ ಗೀತೆಗಳ ಗಾಯನ ಹಾಗೂ ದೇಸಿ ಗೀತೆ-ನೃತ್ಯಗಳು ಸರಕಾರಿ ಪ್ರಥಮ ದರ್ಜೆ ಕಾಲೇಜು ಇರಕಲ್ಲಗಡದಲ್ಲಿ ಆಯೋಜಿಸಿದ್ದ ‘ಜನಪದ ಹಬ್ಬ ಕಾರ್ಯಕ್ರಮದಲ್ಲಿ ಅನುರಣಿಸಿದವು.
ದೇಸಿ ಆಟಗಳು ಮನೋದೈಹಿಕ ವಿಕಾಸಕ್ಕೆ ಕಾರಣವಾಗುತ್ತಿದ್ದವು. ಇಂದಿನ ಆಧುನಿಕ ಕೆಲವೇ ಕೆಲವು ಆಟಗಳ ಭರಾಟೆಯಲ್ಲಿ ‘ಗ್ರಾಮೀಣ ಕ್ರೀಡೆಗಳು’ ಮರೆಯಾಗುತ್ತಿವೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಉಮೇಶ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನಪದ ಹಬ್ಬ ಕಾರ್ಯಕ್ರಮವು ಮೂರು ವೇದಿಕೆಗಳ ಮೂಲಕ ನೆರವೇರಿತು. ಕಾಲೇಜಿನ ಆವರಣದಲ್ಲಿ ದೇಶಿ ಆಟಗಳ ಸೊಗಡು ಮೂಡಿಬಂದಿತು. ವಿದ್ಯಾರ್ಥಿಗಳು ಹಲವು ದೇಸಿ ಆಟಗಳನ್ನು ಆಡುವುದರ ಮೂಲಕ ನಲಿದು ಸಂಭ್ರಮಿಸಿದರು.
ಎರಡನೇ ವೇದಿಕೆಯಾದ ‘ಜನಪದ ಸಂಭ್ರಮ’ದಲ್ಲಿ ಜನಪದ ಹಾಡು, ನೃತ್ಯ, ಕೊರವಂಜಿ ವೇಷಗಳು ನೋಡುಗರ ಕಣ್ಮನ ಸೂರೆಗೊಂಡವು. ಮೂರನೇ ವೇದಿಕೆಯಾದ ದೇಸಿ ಊಟದ ಕೂಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಮತ್ತು ಬೋಧಕರು ತರಹೆವಾರಿ ದೇಸಿ ಖಾದ್ಯಗಳನ್ನು ಸವಿದು ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತ, ಮೊಹರಂ ಹೆಜ್ಜೆಗಳು, ಕೊರವಂಜಿ ನೃತ್ಯ, ಕೋಲಾಟ, ಲಂಬಾಣಿ ನೃತ್ಯಗಳು ‘ಜನಪದ ಹಬ್ಬ’ದಲ್ಲಿ ಜನಮನ ಸೂರೆಗೊಂಡವು. ವಿದ್ಯಾರ್ಥಿಗಳೊಟ್ಟಿಗೆ ಪ್ರಾಧ್ಯಾಪಕರೂ ಸಹ ಡೊಳ್ಳು ಬಾರಿಸಿದ್ದು, ಕೊರವಂಜಿ ಭವಿಷ್ಯ ನುಡಿದಿದ್ದು, ದೇಸಿ ಆಟಗಳನ್ನು ಆಡಿದ್ದು ವಿದ್ಯಾರ್ಥಿಗಳಲ್ಲಿ ಉತ್ಸಾಹ ಮತ್ತು ಆಸಕ್ತಿಯನ್ನು ಇಮ್ಮಡಿಗೊಳಿಸಿತು.
ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ, ಇತಿಹಾಸ ವಿಭಾಗ ಹಾಗೂ ಪಾರಂಪರಿಕ ಕೂಟದ ಸಹಯೋಗದಲ್ಲಿ ಪ್ರೊ.ಆಶಾ ಸಿ ಹಾಗೂ ವೆಂಕಟೇಶ್ ನಾಯಕ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಯೋಜಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕರಾದ ಪ್ರೊ. ಪ್ರಕಾಶಗೌಡ ಎಸ್.ಯು, ಪ್ರೊ.ಅನಿತ ಎಂ, ಪ್ರೊ.ಚಿನ್ನತಾಯಮ್ಮ, ಪ್ರೊ.ಅನಿತ ಎಂ ಪಾಟೀಲ್, ಪ್ರೊ.ಶಂಕ್ರಯ್ಯ ಅಬ್ಬಿಗೇರಿಮಠ, ಪ್ರೊ ದಿವ್ಯಾ, ಪ್ರಥಮ ದರ್ಜೆ ಸಹಾಯಕರಾದ ಶ್ರೀಧರ್, ಉಪನ್ಯಾಸಕರಾದ ಶ್ರೀ ಜಗದೀಶ ಹೂಗಾರ, ಮಹೇಶ ಕುಮಾರ, ಮಹೆಬೂಬ್ ಪಾಶಾ, ಬಸವರಾಜ ಕಲ್ಮನಿ, ಸಂಗಮೇಶ್ವರ ಚನ್ನಪ್ಪ, ಸೋಮಶೇಖರ, ಇಬ್ರಾಹಿಂ ನದಾಪ್, ಅಮೂಲ್ಯ, ಸಾವಿತ್ರಿ, ನಾಗಪ್ಪ ಉಪಸ್ಥಿತರಿದ್ದರು.