ಸುದ್ದಿಮೂಲ ವಾರ್ತೆ
ಬೆಂಗಳೂರು,ಸೆ.6:ನಗರದ ರಾಜಾಜಿನಗರದಲ್ಲಿರುವ ಇಸ್ಕಾನ್ ದೇವಾಲಯದಲ್ಲಿ ಬುಧವಾರ ಮತ್ತು ಗುರುವಾರ ಕೃಷ್ಣ ಜನ್ಮಾಷ್ಠಮಿಯ ಸಂಭ್ರಮ. ಪ್ರತಿ ವರ್ಷದಂತೆ ಈ ಬಾರಿಯೂ ಬಹಳ ವಿಜೃಂಭಣೆಯಿಂದ ಕೃಷ್ಣಾಷ್ಠಮಿಯನ್ನು ಆಚರಿಸಲಾಗುತ್ತಿದೆ.
ಈ ಬಾರಿ ಕೃಷ್ಣ ಹಾಗೂ ರಾಧೆಯನ್ನು ಬಣ್ಣ ಬಣ್ಣದ ಉಡುಗೆ ಹಾಗೂ ಹೂವುಗಳಿಂದ ಅಲಂಕರಿಸಲಾಗಿದೆ.
ಶ್ರೀ ರಾಧಾ ಕೃಷ್ಣಚಂದ್ರ ಉತ್ಸವ ವಿಗ್ರಹಗಳನ್ನು ಸುವಾಸಿತ ತೈಲಗಳು ಮತ್ತು ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಿಹಿ ಜಲ ಮತ್ತು ತಾಜಾ ಹಣ್ಣಿನ ರಸಗಳಿಂದ ಅಭಿಷೇಕ ಮಾಡಲಾಗಿದೆ.. ಅನಂತರ ಅರಿಶಿನ ಚೂರ್ಣದಿಂದ ಲೇಪನ ಮಾಡಲಾಗುವುದು. ಅನಂತರ ಗಂಗಾ ಜಲದಲ್ಲಿ ಅಭ್ಯಂಜನ, ಪುಷ್ಪ ವೃಷ್ಟಿ ಮಾಡಲಾಯಿತು.
ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಸ್ಕಾನ್ ದೇವಸ್ಥಾನಕ್ಕೆ ಆಗಮಿಸಿ ಭಕ್ತರು ದರ್ಶನ ಪಡೆಯುತ್ತಿದ್ದಾರೆ. ಭಕ್ತರಿಗೆ ವಿಶೇಷ ಪೂಜೆ, ದರ್ಶನ ವ್ಯವಸ್ಥೆ, ಪ್ರಸಾದ ಹಾಗೂ ಕೃಷ್ಣನ ಭಜನೆಗಳನ್ನು ಏರ್ಪಡಿಸಿದೆ. ಜನ್ಮಾಷ್ಟಮಿಯಂದು ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನಿಗೆ 108 ಬಗೆಯ ಖಾದ್ಯಗಳನ್ನು ಅರ್ಪಿಸಲಾಗುವುದು. ದೇವರ ದರ್ಶನಕ್ಕೆಂದು ಈ ಶುಭ ದಿನದಂದು ಮಂದಿರಕ್ಕೆ ಬರುವ ಅಸಂಖ್ಯ ಭಕ್ತರಿಗೆ ಹಂಚಲು ಟನ್ ಗಟ್ಟಲೆ ಸಿಹಿ ಪೊಂಗಲ್ ಅನ್ನು ಕೂಡ ತಯಾರಿಸಲಾಗಿದೆ.