ಸುದ್ದಿಮೂಲ ವಾರ್ತೆ
ನೆಲಮಂಗಲ,ನ.05 : ತಾಲೂಕಿನ ಸೋಂಪುರ ಹೋಬಳಿಯ ಶಿವಗಂಗೆ ಬೆಟ್ಟದ ತಪ್ಪಲು, ಆಲದಹಳ್ಳಿ ಬೆಟ್ಟದ ತಪ್ಪಲಿನ ಗ್ರಾಮಗಳಲ್ಲಿ ದಿನೇ ಚಿರತೆ ಉಪಟಳ ಹೆಚ್ಚಾಗುತ್ತಿದೆ.
ಸೋಂಪುರ ಹೋಬಳಿಯಲ್ಲಿ ಮತ್ತೊಮ್ಮೆ ಚಿರತೆಯೊಂದು ಕಾಣಿಸಿಕೊಂಡು ಜನರನ್ನು ಭಯಗೊಳಿಸಿದೆ. ಈ ಬಾರಿ ಬೆಳಗ್ಗೆಯೇ ಕೋಳಿ ಶೆಡ್ ಮೇಲೆ ದಾಳಿ ಮಾಡಿದ ಚಿರತೆ ಸುಮಾರು ನೂರರಷ್ಟು ನಾಟಿ ಕೋಳಿಗಳನ್ನು ತಿಂದು ಹಾಕಿದೆ.
ಸೋಂಪುರ ಹೋಬಳಿಯ ಬಾಪೂಜಿ ನಗರದ ರಾಜೇಶ್ ಎಂಬುವರ ತೋಟದಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ 10.30ರ ಸಮಯದಲ್ಲಿ ತೋಟದ ಮನೆಯಲ್ಲಿದ್ದ ಕೋಳಿ ಶೆಡ್ ಮೇಲೆ ಚಿರತೆ ದಾಳಿ ಮಾಡಿದೆ.
ತೋಟದಲ್ಲಿ ಜನರು ಇರುವ ಸಮಯಕ್ಕೆ, ಕೋಳಿಫಾರಂ ನ ಒಂದು ಬದಿಯ ಗೋಡೆ ಬೀಳಿಸಿ, ಕೋಳಿಫಾರಂಗೆ ನುಗ್ಗಿ ಕೋಳಿಗಳನ್ನು ತಿಂದು ಹತ್ತಕ್ಕೂ ಅಧಿಕ ಕೋಳಿಗಳ ರಕ್ತ ಹೀರಿ ಹೋಗಿದೆ ಎಂದು ಕೋಳಿ ಫಾರಂ ಮಾಲೀಕ ರಾಜೇಶ್ ಗೌಡ ತಿಳಿಸಿದ್ದಾರೆ.
ಬೆಳಗ್ಗೆ ಸಮಯದಲ್ಲಿಯೇ ಚಿರತೆ ದಾಳಿ ಮಾಡಿರೋದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ತೋಟ ಮತ್ತು ಹೊಲಗಳಿಗೆ ರಾತ್ರಿ ವೇಳೆ ಹೋಗಲು ಹೆದರುತ್ತಿದ್ದ ಜನರು ಈಗ ಹಗಲಲ್ಲೇ ತೋಟಗಳಿಗೆ ಹೋಗಲು, ಮೇಕೆ ದನ ಮೇಯಿಸಲು ಭಯ ಪಡುವ ಸ್ಥಿತಿ ಬಂದಿದೆ.
ನಾಲ್ಕು ದಿನಗಳ ಹಿಂದೆಯಷ್ಟೇ ತಾಲ್ಲೂಕಿನ ಕೆರೆಕೆತ್ತಿಗನೂರಿನಲ್ಲಿ ರಾತ್ರಿ ವೇಳೆ ಚಿರತೆ ಕಾಣಿಸಿಕೊಂಡಿತ್ತು. ಸ್ಥಳೀಯರ ಒತ್ತಾಯಕ್ಕೆ ಮಣಿದ ಅರಣ್ಯ ಇಲಾಖೆ ಚಿರತೆ ದಾಳಿ ಮಾಡಿದ ಕೋಳಿ ಫಾರಂ ಸಮೀಪ ಬೋನು ಇಟ್ಟು, ಚಿರತೆ ಸೆರೆಗೆ ಮುಂದಾಗಿದೆ. ಚಿರತೆ ಸೆರೆ ಹಿಡಿಯಲು ರಾಜೇಶ್ ರ ಕೋಳಿಫಾರಂ, ಬೆಟ್ಟಹಳ್ಳಿ ಹಾಗೂ ಮೆಳೆಕತ್ತಿಗನೂರು ಗ್ರಾಮದ ಮೂರು ಕಡೆ ಬೋನನ್ನು ಇಡಲಾಗಿದೆ ಎಂದರು ಅರಣ್ಯ ವೀಕ್ಷಕ ನಾಗರಾಜು ತಿಳಿಸಿದ್ದಾರೆ.