ಸುದ್ದಿಮೂಲ ವಾರ್ತೆ
ಮೈಸೂರು,ಜೂ.23: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ವಲಯದ ಕೂತನೂರು ಬಳಿಯ ಕೃಷಿ ಜಮೀನಿನಲ್ಲಿ ಹೆಣ್ಣು ಚಿರತೆಯೊಂದನ್ನು ವಿಷ ಹಾಕಿ ಕೊಲ್ಲಲಾಗಿದೆ.
ಗುಂಡ್ಲುಪೇಟೆ ಕಸಬಾ ಹೋಬಳಿಯ ಕೂತನೂರು ಬಳಿ ಸರ್ವೆ ನಂಬರ್ 68ರಲ್ಲಿರುವ ಜಿ.ಆರ್.ಗೋವಿಂದರಾಜು ಎಂಬುವವರಿಗೆ ಸೇರಿದ ಜಮೀನಿನಲ್ಲಿ ಚಿರತೆಯ ಮೃತದೇಹ ಗುರುವಾರ ಪತ್ತೆಯಾಗಿದೆ.
ಮೂರು ವರ್ಷದ ಹೆಣ್ಣು ಚಿರತೆಯು ಸಾಕು ನಾಯಿಯನ್ನು ಕೊಂದಿದ್ದಕ್ಕಾಗಿ ಕೃಷಿ ಜಮೀನಿನ ಕಾವಲುಗಾರ ನಾಯಿಯ ಕಳೇಬರಕ್ಕೆ ಕೀಟನಾಶಕ ಸಿಂಪಡಿಸಿದ್ದರು. ಚಿರತೆಯು ಮತ್ತೆ ಬಂದು ನಾಯಿಯ ಮೃತದೇಹವನ್ನು ತಿಂದ ಕಾರಣದಿಂದ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಅಧಿಕಾರಿಗಳು ಪರಿಶೀಲಿಸಿ ವಿಚಾರಣೆ ನಡೆಸಿದಾಗ, ಆ ಜಮೀನಿನ ಪಕ್ಕದಲ್ಲಿರುವ ಸರ್ವೇ ನಂಬರ್ 64ರಲ್ಲಿರುವ ಸೋಮಶೇಖರ್ ಎಂಬುವವರಿಗೆ ಸೇರಿದ ಜಮೀನಿನ ಕಾವಲುಗಾರ ರಮೇಶ್ ಎಂಬುವವರು ನಾಯಿಯ ಮೃತದೇಹಕ್ಕೆ ಕ್ರಿಮಿನಾಶಕ ಸಿಂಪುಡಿಸಿರುವುದು ಗೊತ್ತಾಗಿದೆ. ರಮೇಶ್ ಅವರನ್ನು ವಿಚಾರಣೆ ನಡೆಸಿದಾಗ ಅವರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ರಮೇಶ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಂಡೀಪುರ ಹುಲಿಯೋಜನೆಯ ಪಶುವೈದ್ಯ ಡಾ.ಮಿರ್ಜಾ ವಾಸೀಂ ಅವರು ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಚಿರತೆಯ ಕಳೇಬರವನ್ನು ಸುಡಲಾಯಿತು. ಹುಲಿಯೋಜನೆ ನಿರ್ದೇಶಕ ಪಿ.ರಮೇಶ್ ಕುಮಾರ್, ಎಸಿಎಫ್ ಜಿ. ರವೀಂದ್ರ, ಆರ್ಎಫ್ಒ ಎನ್.ಪಿ ನವೀನ್ಕುಮಾರ್, ಸರ್ಕಾರೇತರ ಸಂಸ್ಥೆ ಸದಸ್ಯರಘುರಾಂ ಇತರರು ಇದ್ದರು.