ಕಲಬುರಗಿ, ಏ.1: ವಿಧಾನಸಭಾ ಚುನಾವಣೆಯ ಚಿಂಚೋಳಿ ಮತಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿಯು ಗೆಲ್ಲುತ್ತಾರೆಯೋ, ಆ ಪಕ್ಷವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂಬ ನಂಬಿಕೆ ರಾಜ್ಯ ರಾಜಕಾರಣದಲ್ಲಿದೆ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಚಿಂಚೋಳಿ ಮತಕ್ಷೇತ್ರದಲ್ಲಿ ವಿಜಯ್ ಪತಾಕೆ ಹಾರಿಸಲು ಎಲ್ಲ ಪಕ್ಷಗಳು ಸರ್ವ ಸಿದ್ಧತೆ ನಡೆಸಿವೆ.
ಈಗಾಗಲೇ ಚಿಂಚೋಳಿ ಮತಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಸುಭಾಷ್ ರಾಠೋಡ್, ಜೆಡಿಎಸ್ ನಿಂದ ಸಂಜೀವನ್ ಯಾಕಪೂರ್ ಹಾಗೂ ಬಿಎಸ್ಪಿಯಿಂದ ಗೌತಮ್ ಬೊಮ್ಮನಳ್ಳಿ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಅತ್ತ ಬಿಜೆಪಿಯಿಂದ ಅಭ್ಯರ್ಥಿ ಘೋಷಣೆಯಾಗಬೇಕಿದೆ.
ಸದ್ಯ ಚಿಂಚೋಳಿ ಮತಕ್ಷೇತ್ರವು ಬಿಜೆಪಿ ಹಿಡಿತದಲ್ಲಿದೆ. ಹಾಲಿ ಬಿಜೆಪಿಯ ಡಾ. ಅವಿನಾಶ್ ಜಾಧವ್ ಶಾಸಕರಾಗಿದ್ದಾರೆ. ಅವರೇ ಮತ್ತೊಮ್ಮೆ ಚುನಾವಣೆ ಅಖಾಡಕ್ಕೆ ಇಳಿಯಲಿದ್ದು, ಬಿಜೆಪಿಯಿಂದ ಅಧಿಕೃತ ಘೋಷಣೆಯೊಂದೆ ಬಾಕಿ ಇದೆ. ಈ ಮಧ್ಯೆ ಸಂಸದ ಡಾ. ಉಮೇಶ್ ಜಾಧವ್ ಅವರು ತಮ್ಮ ಪುತ್ರ, ಶಾಸಕ ಅವಿನಾಶ್ ಜಾಧವ್ ಬದಲು ತಾವೇ ಕಣಕ್ಕಿಳಿಯಲಿದ್ದಾರೆ ಅನ್ನುವ ಮಾತುಗಳು ಮತಕ್ಷೇತ್ರದಲ್ಲಿ ಚರ್ಚೆಯಲಿವೆ. ಆದರೆ ಬಿಜೆಪಿ ಹೈಕಮಾಂಡ್ ಯಾರ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ನೀಡಲಿದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.
ಕ್ಷೇತ್ರದಲ್ಲಿ ಬಿಜೆಪಿಯಿಂದ ಯಾರೇ ಸ್ಪರ್ಧೆಗೆ ಇಳಿದರು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವುದು ನಿಶ್ಚಿತವಾಗಿದೆ. ಈ ಮಧ್ಯೆ ಬಿಎಸ್ಪಿಯೂ ಕಣದಲ್ಲಿದ್ದು, ಮತದಾರ ಪ್ರಭುಗಳು ಯಾರಿಗೆ ಆಶೀರ್ವಾದ ಮಾಡುತ್ತಾರೋ ಎಂಬುದು ಕುತೂಹಲ ಮೂಡಿಸಿದೆ.
ಆಪರೇಷನ್ ಹಸ್ತ :
ಚಿಂಚೋಳಿ ಮತಕ್ಷೇತ್ರದಲ್ಲಿ ಪಕ್ಷಾಂತರದ ಬಗ್ಗೆ ಚರ್ಚೆ ಜೋರಾಗಿ ನಡೆದಿದೆ. ಕಾಂಗ್ರೆಸ್ ಪಕ್ಷ ಈಗಾಗಲೇ ಬಿಜೆಪಿ ಹಲವು ನಾಯಕರನ್ನು ತನ್ನತ ಸೆಳೆಯುವ ನಿಟ್ಟಿನಲ್ಲಿ ಗಾಳ ಹಾಕಿದು, ಅ ಪಟ್ಟಿಯಲ್ಲಿ ಚಿಂಚೋಳಿ ಬಿಜೆಪಿ ನಾಯಕರ ಹೆಸರು ಇದೆ ಅನ್ನುವ ಬಗ್ಗೆ ಮತಕ್ಷೇತ್ರದಲ್ಲಿ ಚರ್ಚೆ ನಡೆದಿದೆ.
ಇತ್ತೀಚಿಗೆ ಕಲಬುರಗಿಯಲ್ಲಿ ನಡೆದ ಪಿಎಂ ಮಿತ್ರ ಪಾರ್ಕ್ ಗೆ ಚಾಲನೆ ನೀಡುವ ಕಾರ್ಯಕ್ರಮದ ಜಾಹಿರಾತಿನಲ್ಲಿ ಸಂಸದರ ಹೆಸರು ಕೈ ಬಿಡಲಾಗಿತ್ತು ಎನ್ನಲಾಗಿದೆ. ಇದು ಚಿಂಚೋಳಿಯಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ಗೆ ಪಕ್ಷಾಂತರ ಆಗುವ ಸಾಧ್ಯತೆ ಇದೆ ಅನ್ನುವುದಕ್ಕೆ ಪುಷ್ಠಿ ನೀಡುತ್ತದೆ ಎಂದು ಮತಕ್ಷೇತದ ಜನರು ಚರ್ಚೆತೊಡಗಿದ್ದಾರೆ.
ಚಿಂಚೋಳಿಯಲ್ಲಿ ಗೆದ್ದವರ ಪಕ್ಷವೇ ರಾಜ್ಯದಲ್ಲಿ ಅಧಿಕಾರಕ್ಕೆ:
ಚಿಂಚೋಳಿ ವಿಧಾನಸಭಾ ಕ್ಷೇತ್ರದ ಪ್ರತಿ ಚುನಾವಣೆಯಲ್ಲೂ ಇಲ್ಲಿ ಗೆದ್ದವರ ಪಕ್ಷವೇ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದೆ ಎನ್ನುವ ಪ್ರತಿತಿ ಇದ್ದು, ಅದಕ್ಕೆ ಕೆಲ ಸಾಕ್ಷಿಗಳಿವೆ. 2004ರಲ್ಲಿ ಜೆಡಿಎಸ್ ನ ವೈಜುನಾಥ್ ಪಾಟೀಲ್ ಶಾಸಕರಾಗಿದ್ದರು. ಆಗ 2006ರಲ್ಲಿ ಜೆಡಿಎಸ್- ಬಿಜೆಪಿ ಸಮಿಶ್ರ ಸರಕಾರ ರಚನೆಯಾಗಿ ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆದರು. 2008ರಲ್ಲಿ ಬಿಜೆಪಿಯ ಸುನೀಲ್ ವಲ್ಲ್ಯಾಪುರ ಗೆದ್ದು, ಶಾಸಕರಾಗಿದ್ದಾಗ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾದ್ದರು. 2013ರಲ್ಲಿ ಕಾಂಗ್ರೆಸ್ ನಿಂದ ಡಾ. ಉಮೇಶ್ ಜಾಧವ ಶಾಸಕರಾಗಿ ಆಯ್ಕೆಯಾದಾಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು.
ಅದೇರೀತಿ 2018ರಲ್ಲೂ ಡಾ. ಉಮೇಶ್ ಜಾಧವ ಗೆದ್ದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಸಮಿಶ್ರ ಸರಕಾರ ಅಸ್ತಿತ್ವದಲ್ಲಿತ್ತು. ಆದರೆ, 2019ರಲ್ಲಿ ಆಪರೇಷನ್ ಕಮಲಕ್ಕೆ ಒಳಗಾಗಿ ಡಾ. ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಡಾ. ಅವಿನಾಶ್ ಜಾಧವ ಅವರು ಶಾಸಕರಾಗಿ ಆಯ್ಕೆಯಾದರು. ನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಈ ನಂಬಿಕೆಗೆ ಸಾಕ್ಷಿಯಾಗಿದೆ. ಹೀಗಾಗಿ ಎಲ್ಲ ಪಕ್ಷಗಳು ಕ್ಷೇತ್ರದ ಗೆಲುವಿಗಾಗಿ ಶತಾಯಗತಾಯ ಪ್ರಯತ್ನ ನಡೆಸಿವೆ.
ಜಾತಿ ಲೆಕ್ಕಾಚಾರ :
ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಚಿಂಚೋಳಿ (ಮೀಸಲು) ಕ್ಷೇತ್ರದಲ್ಲಿ ತಾಂಡಾಗಳು ಅಧಿಕವಾಗಿವೆ.
ಪರಿಶಿಷ್ಟ ವರ್ಗದ ಜತೆಗೆ ಲಿಂಗಾಯತ, ಕೋಲಿ ಸಮಾಜದ ಮತಗಳು ಅಧಿಕವಾಗಿವೆ. ಅಲ್ಲದೇ, ಮುಸ್ಲಿಂ ಸಮುದಾಯ, ಕುರುಬ ಸಮುದಾಯದ ಮತಗಳು ನಿರ್ಣಾಯಕವಾಗಿವೆ.
ಒಟ್ಟು ಮತದಾರರು: 1,99,154
ಪುರುಷರು: 1,01,639
ಮಹಿಳೆಯರು: 97,515
*****
ಚಿಂಚೋಳಿ ಕ್ಷೇತ್ರದ ಚುನಾವಣಾ ಹಿನ್ನೋಟ:
2013
**ಡಾ. ಉಮೇಶ್ ಜಾಧವ(ಕಾಂಗ್ರೆಸ್)-58599
**ಸುನೀಲ್ ವಲ್ಲಾಪುರೆ (ಕೆಜೆಪಿ)-32539
2018:
**ಡಾ. ಉಮೇಶ್ ಜಾಧವ(ಕಾಂಗ್ರೆಸ್)-73905
**ಸುನೀಲ್ ವಲ್ಲಾಪುರೆ (ಬಿಜೆಪಿ)-54693
2019 (ಉಪಚುನಾವಣೆ):
**ಡಾ. ಅವಿನಾಶ್ ಜಾಧವ (ಬಿಜೆಪಿ)-69,109
**ಸುಭಾಷ್ ರಾಠೋಡ್(ಕಾಂಗ್ರೆಸ್)-61,079