ಸುದ್ದಿಮೂಲ ವಾರ್ತೆ
ಮೈಸೂರು,ನ.5:ಕಾಡಿನಲ್ಲಿ ಬೇಟೆಯಾಡಿ ಕಡವೆಗಳನ್ನು ಕೊಂಡೊಯ್ಯುತ್ತಿದ್ದ ಗುಂಪಿನ ಮೇಲೆ ಅರಣ್ಯ ಇಲಾಖೆ ಅಧಿಕಾರಿ ಗುಂಡು ಹಾರಿಸಿದಾಗ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಅರಣ್ಯವಲಯದಲ್ಲಿನಡೆದಿದೆ.
ಗುಂಡ್ಲುಪೇಟೆ ತಾಲ್ಲೂಕಿನಭೀಮನಬೀಡು ಗ್ರಾಮದ ನಿವಾಸಿ ಮನೋಜ್ (25) ಗುಂಡಿನ ದಾಳಿಗೆ ಬಲಿಯಾದ ಬೇಟೆಗಾರ. 10 ಬೇಟೆಗಾರರ ತಂಡ ಶನಿವಾರ ತಡರಾತ್ರಿ ಮಾಂಸಕ್ಕಾಗಿ ಕಡವೆಗಳನ್ನು ಬೇಟೆಯಾಡಲು ಬಂದಿದ್ದರು. ಬೇಟೆಗಾರರು ನಾಲ್ಕಕ್ಕೂ ಹೆಚ್ಚು ಕಡವೆ ಬೇಟೆಯಾಡಿ ಕೊಂಡೊಯ್ಯುತ್ತಿದ್ದರು.
ಪ್ರತಿ ದಾಳಿಗೆ ಯತ್ನಿಸಿದಾಗ ಗುಂಡು
ಈ ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಬೇಟೆಗಾರರನ್ನು ಬಂಧಿಸಲು ಯತ್ನಿಸಿದ್ದಾರೆ. ಈ ವೇಳೆ ಬೇಟೆಗಾರರು ಅರಣ್ಯಾಧಿಕಾರಿಗಳ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಅರಣ್ಯಾಧಿಕಾರಿ ಆತ್ಮರಕ್ಷಣೆಗಾಗಿ ಬೇಟೆಗಾರರ ಮೇಲೆ ಫೈರಿಂಗ್ ಮಾಡಿದ್ದಾರೆ. ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದವರು ಪರಾರಿಯಾಗಿದ್ದು ಗುಂಡೇಟಿಗೆ ಬಲಿಯಾದ ಚಾಮರಾಜನಗರ ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಮೃತನ ಮರಣೋತ್ತರ ಪರೀಕ್ಷೆ ನಡೆಸಲಾಯಿತು.