ಸುದ್ದಿಮೂಲ ವಾರ್ತೆ
ಮೈಸೂರು, ಮೇ 17: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸಿಎಂ ಮಾಡಬೇಕೆಂದು ಆಗ್ರಹಿಸಿ ಕುವೆಂಪುನಗರದ ಬಂದಂತಮ್ಮ ಕಾಳಮ್ಮ ದೇಗುಲದ ಆವರಣದಲ್ಲಿ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿಯ ಸಮ್ಮುಖದಲ್ಲಿ ಸಭೆ ನಡೆಸಿದ ಒಕ್ಕಲಿಗ ಮುಖಂಡರು ಆಗ್ರಹಿಸಿದರು.
ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ ಡಿ.ಕೆ.ಶಿವಕುಮಾರ್ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಸಿಎಂ ಆಗುತ್ತಾರೆ ಎಂದು ಒಕ್ಕಲಿಗ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ಗೆ ಮತ ನೀಡಿದೆ. ಡಿಕೆಶಿಗೆ ಸಿಎಂ ಸ್ಥಾನ ನೀಡದಿದ್ದರೆ ಒಕ್ಕಲಿಗ ಸಮಾಜ ಕಾಂಗ್ರೆಸ್ನಿಂದ ದೂರ ಸರಿಯಲಿದೆ ಎಂದು ಸಂದೇಶ ರವಾನಿಸಿದರು.
ಈ ವೇಳೆ ಮಾತನಾಡಿದ ಆದಿಚುಂಸನಗಿರಿ ಮಠದ ನಗರ ಶಾಖೆಯ ಸ್ವಾಮೀಜಿ, ಡಿಕೆ ಶಿವಕುಮಾರ್ ಸಮಾಜಕ್ಕೆ ತನ್ನದೇ ಆದ ಸೇವೆ ನೀಡಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರಲು ಅವಿರತ ಶ್ರಮಿಸಿದ್ದಾರೆ. ಅವರು ಸಿಎಂ ಆಗುತ್ತಾರೆ ಎಂಬ ಕಾರಣಕ್ಕಾಗಿಯೇ ಒಕ್ಕಲಿಗರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ಇದರಿಂದಾಗಿ ಸಿಎಂ ಸ್ಥಾನವನ್ನು ಅವರಿಗೇ ನೀಡಬೇಕಾಗುತ್ತದೆ. ಅವರು ಯುವಕರಾಗಿರುವುದರಿಂದ ಭವಿಷ್ಯದಲ್ಲಿ ಒಳ್ಳೆಯ ಕೆಲಸ ಮಾಡುತ್ತಾರೆ. ಜತೆಗೆ ಯುವಕರಿಗೆ ಒಳ್ಳೆಯ ಮಾರ್ಗದರ್ಶನ ನೀಡಲಿದ್ದಾರೆ ಎಂದರು.
ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ನಗರಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ ಮಾತನಾಡಿ, ಪಕ್ಷಕ್ಕಾಗಿ ಡಿ.ಕೆ.ಶಿವಕುಮಾರ್ ಸರ್ವಸ್ವವನ್ನೂ ತ್ಯಾಗ ಮಾಡಿ ಹೋರಾಟ ಮಾಡಿದ್ದಾರೆ. ಪಕ್ಷ ಸಂಕಷ್ಟದಲ್ಲಿದ್ದಾಗ ಪಕ್ಷ ಮುನ್ನಡೆಸಿ ಈ ಹಂತಕ್ಕೆ ತಂದಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಪಕ್ಷ ಬಲಿಷ್ಠಗೊಳಿಸುವಲ್ಲಿಯೂ ಅವರದೇ ಪಾಲು ಹೆಚ್ಚಿದೆ. ಇದೆಲ್ಲಾ ಕಾರಣ ಪರಿಗಣಿಸಿ ಪಕ್ಷ ಅವರಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಒಕ್ಕಲಿಗ ಹಿತಚಿಂತಕ ಶಂಕರ್, ಟಿ.ರವಿ ಗೌಡ, ರಾಜು, ಸುರೇಶ್. ಸಿ.ರಮೇಶ್, ಡಿ.ರಮೇಶ್, ಎಂ.ಮೋಹನ್ ಕುಮಾರ್ ಗೌಡ, ಬಂದಂತಮ್ಮ ಕಾಳಮ್ಮ ದೇವಸ್ಥಾನದ ಅಧ್ಯಕ್ಷ ಶ್ರೀನಿವಾಸ್, ಶಂಭು, ರವೀಂದ್ರ, ತಾಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ಕೃಷ್ಣೇಗೌಡ, ಶ್ರೀನಿವಾಸ್, ವಕೀಲರಾದ ಕೃಷ್ಣ, ಬಸವರಾಜ್, ದಿನೇಶ್, ಜಗ್ಗೇಶ್ ಇನ್ನಿತರರು ಪದಾಧಿಕಾರಿಗಳು ಹಾಗೂ ಸಭೆಯಲ್ಲಿ ಹಾಜರಿದ್ದರು.