ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 12: ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಶನಿವಾರ ಪ್ರಕಟವಾಗುವ ಹಿನ್ನೆಲೆಯಲ್ಲಿ ಮುಂದೆ ಇಡಬೇಕಾದ ಹೆಜ್ಜೆಗಳ ಕುರಿತು ಬಿಜೆಪಿ ನಾಯಕರು ಇಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನಿವಾಸದಲ್ಲಿ ಚರ್ಚೆ ನಡೆಸಿದರು.
ಬಿಎಸ್ವೈ ನಿವಾಸಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿದ್ದರು. ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಬೈರತಿ ಬಸವರಾಜ್, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ, ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಸಹಿತ ಹಲವು ನಾಯಕರು ಭೇಟಿ ನೀಡಿ ಚರ್ಚೆ ನಡೆಸಿದರು.
ಮತದಾನೋತ್ತರ ಸಮೀಕ್ಷೆಗಳು ಬಿಜೆಪಿಗೆ ಹಿನ್ನಡೆಯಾಗಲಿದೆ ಎಂಬ ಸಮೀಕ್ಷಾ ವರದಿಗಳನ್ನು ನೀಡಿದ್ದರೂ ಸಹ ಬಿಜೆಪಿಯ ಆಂತರಿಕ ಸಮೀಕ್ಷೆಗಳೂ ಮತ್ತು ಪೋಲಿಂಗ್ ಬೂತ್ಗಳಿಂದ ಕಾರ್ಯಕರ್ತರು ನೀಡಿದ ವರದಿಯ ಪ್ರಕಾರ ಬಿಜೆಪಿ ಅಧಿಕಾರದ ಹತ್ತರದಲ್ಲಿದೆ ಎಂಬ ನಿರೀಕ್ಷೆ ಇದೆ. ಹೀಗಾಗಿ ಚುನಾವಣೆಯಲ್ಲಿ ಯಾವ ರೀತಿಯ ಫಲಿತಾಂಶ ಬರಬಹುದು ಎಂಬ ಕುರಿತು ಚರ್ಚೆ ನಡೆಸಲಾಗಿದೆ.
ರಾಜ್ಯದಲ್ಲಿ ಒಂದು ವೇಳೆ ಮೈತ್ರಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಂದರೆ ಜೆಡಿಎಸ್ ಜೊತೆ ಹೋಗಬೇಕೆ, ಬೇಡವೇ ಎಂಬುದರ ಬಗ್ಗೆಯೂ ಸಹ ಸಾಂದರ್ಭಿಕ ಚರ್ಚೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ಅಧಿಕಾರದ ಹತ್ತಿರಕ್ಕೆ ಬಂದರೂ ಸಹ ಕೆಲವು ಸೀಟುಗಳ ಕೊರತೆಯಾದಲ್ಲಿ ಯಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಹುದು, ಬಿಜೆಪಿಯಿಂದ ರೆಬೆಲ್ ಆಗಿ ಸ್ಪರ್ಧಿಸಿದವರ ಪೈಕಿ ಯಾರು ಗೆಲ್ಲಬಹುದು, ಅಂತವರನ್ನು ಮರಳಿ ಪಕ್ಷದಲ್ಲಿಯೇ ಉಳಿಸಿಕೊಳ್ಳುವ ಬಗೆ ಹೇಗೆ ಎಂಬಂತಹ ವಿಷಯಗಳೂ ಸಹ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಯಡಿಯೂರಪ್ಪ ಅವರ ಮುಂದೆ ಚರ್ಚೆಗೆ ಬಂದಿವೆ.
ರಾಜ್ಯದಲ್ಲಿ ಯಾವುದೇ ಬೆಳವಣಿಗೆ ನಡೆದರೂ ಸಹ ಪಕ್ಷದ ಹೈಕಮಾಂಡ್ ನಾಯಕರಿಗೆ ಕೂಡಲೇ ವರದಿ ಮುಟ್ಟಿಸುವುದು, ಅಲ್ಲಿಂದ ಬರುವ ಸಂದೇಶಗಳನ್ನು ತಕ್ಷಣವೇ ಕಾರ್ಯರೂಪಕ್ಕೆ ತರಲು ನಾಯಕರು ನಿರ್ಧರಿಸಿದರು ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ಗೆ ಅವರ ಶಾಸಕರ ಮೇಲೆ ನಂಬಿಕೆ ಇಲ್ಲ:
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ನವರಿಗೆ ಬಹುಮತ ಬರಲ್ಲ. ಹಾಗಾಗಿ ಬೇರೆ ಪಕ್ಷದವರ ಜತೆ ಮಾತನಾಡುವ ಪ್ರಯತ್ನ ಪಡ್ತಿದಾರೆ. ಅವರ ಶಾಸಕರ ಮೇಲೆ ಅವರಿಗೆ ನಂಬಿಕೆ ಇಲ್ಲ ಎಂದರು.
ನಾನು ಮೊದಲಿಂದಲೂ ಒಂದೇ ಮಾತು ಹೇಳುತ್ತ ಬಂದಿದ್ದೇನೆ. ನಮಗೆ ಸ್ಪಷ್ಟ ಬಹುಮತ ಬರುತ್ತದೆ. ನಾವು ಗೆಲ್ಲುವ ವಿಶ್ವಾಸ ಇದ್ದು, ಬಹುಮತದ ಗಡಿ ದಾಟುತ್ತೇವೆ. ಮ್ಯಾಜಿಕ್ ನಂಬರ್ ತಲುಪುತ್ತೇವೆ. ಎಲ್ಲ ಕ್ಷೇತ್ರ, ಬೂತ್ ಗಳಿಂದ ಗ್ರೌಂಡ್ ಮಾಹಿತಿ ತರಿಸಿದ್ದೇವೆ ಎಂದರು.
ನಾನೇ ವರಿಷ್ಠರಿಗೆ ಕರೆ ಮಾಡಿ ಇಲ್ಲಿನ ವಸ್ತುಸ್ಥಿತಿ ಬಗ್ಗೆ ಹೈಕಮಾಂಡ್ ನಾಯಕರಿಗೆ ತಿಳಿಸಿದ್ದೇನೆ. ಹೈಕಮಾಂಡ್ ನಾಯಕರು ಸಹ ಗೆಲ್ಲುವ ವಿಶ್ವಾಸದಲ್ಲಿದ್ದು, ಬಿಜೆಪಿ ಸರ್ಕಾರ ರಚಿಸುವ ವಿಶ್ವಾಸವಿದೆ ಎಂದರು.
ಈಗ ನಮ್ಮ ಮುಂದೆ ಮೈತ್ರಿಯ ಪ್ರಶ್ನೆ ಇಲ್ಲ. ನಾವು ಬಹುಮತ ದಾಟುತ್ತೇವೆ. ಕಾಂಗ್ರೆಸ್ನವರು ಏನೇ ಸಭೆ ಮಾಡಲಿ. ಅವರಿಗೆ ಸಭೆ ಮಾಡುವ ಹಕ್ಕಿದೆ. ಎಲ್ಲ ಪಕ್ಷಗಳೂ ಸಭೆ ಮಾಡುತ್ತಾರೆ ಎಂದರು.