ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.20: ಬಿಜೆಪಿಯಿಂದ ಲಿಂಗಾಯತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿರುವುದರ ಮಧ್ಯೆಯೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಯ ಲಿಂಗಾಯತ-ವೀರಶೈವ ನಾಯಕರು ಸಭೆ ನಡೆಸಿದರು.
ಯಡಿಯೂರಪ್ಪ ನಿವಾಸ ಕಾವೇರಿಯಲ್ಲಿ ನಡೆದ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಭಗವಂತ್ ಖೂಬ, ಸಚಿವರಾದ ವಿ. ಸೋಮಣ್ಣ, ಜೆ.ಸಿ. ಮಾಧುಸ್ವಾಮಿ, ಬಿ.ಸಿ. ಪಾಟೀಲ್, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ, ಅರವಿಂದ ಬೆಲ್ಲದ, ಸಂಸದರಾದ ಜಿ.ಎಂ. ಸಿದ್ದೇಶ್ವರ್, ಗದ್ದಿಗೌಡರ್, ಅಣ್ಣಾ ಸಾಹೇಬ್ ಜೊಲ್ಲೆ ಸಹಿತ ಹಲವು ಮುಖಂಡರು ಭಾಗಿಯಾಗಿದ್ದರು.
ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಲಿಂಗಾಯತ ನಾಯಕರೇ ಮುಖ್ಯಮಂತ್ರಿ ಆಗಬೇಕು ಎಂದು ಬಿಜೆಪಿ ಹೈಕಮಾಂಡ್ಗೆ ಸಂದೇಶ ತಲುಪಿಸಬೇಕು ಎಂಬ ನಿಟ್ಟಿನಲ್ಲಿ ಚರ್ಚೆ ನಡೆಸಲಾಯಿತು ಎನ್ನಲಾಗಿದೆ.
ಸಭೆ ಬಳಿಕ ಮಾತನಾಡಿದ ರೇಣುಕಾಚಾರ್ಯ ಅವರು, ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಸಂಬಂಧ ಯಡಿಯೂರಪ್ಪ ಅವರ ನಿವಾಸದಲ್ಲಿ ಮಾತುಕತೆ ನಡೆಸಲಾಯಿತು ಹೊರತು ಬೇರೆ ಯಾವುದೇ ಉದ್ದೇಶ ಇರಲಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಸಂಘಟನೆ ಬಲಿಷ್ಠವಾಗಿದೆ. ಹೆಚ್ಚಿನ ಕಾರ್ಯಕರ್ತರ ಪಡೆ ಇದೆ. ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಪರವಾದ ಗಾಳಿ ಇದ್ದು, ಪಕ್ಷ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು.