ಸುದ್ದಿಮೂಲ ವಾರ್ತೆ
ಆನೇಕಲ್, ಏ.20: ಮೇಕೆದಾಟು ಅಣೆಕಟ್ಟು ಯೋಜನೆ ವಿರೋಧಿಸಿದ್ದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ನಡೆಯನ್ನು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸಮರ್ಥಿಸಿದ್ದಾರೆ.
ಅಣ್ಣಾಮಲೈ ಅವರು ತಮ್ಮ ರಾಜ್ಯಕ್ಕೆ ಅನುಗುಣವಾಗಿ ಮಾತನಾಡಿರುತ್ತಾರೆ. ನನ್ನ ರಾಜ್ಯ ವಿಚಾರ ಬಂದಾಗ ನಾನು ಸಹ ನೆಲ, ಜಲ, ಭೂಮಿ ನನ್ನ ರಾಜ್ಯವನ್ನು ರಕ್ಷಣೆ ಮಾಡುವ ಕೆಲಸ ನಾನು ಮಾಡುತ್ತೇನೆ ಎಂದು ಸಮರ್ಥಿಸಿದರು.
ಆನೇಕಲ್ ಬಿಜೆಪಿ ಅಭ್ಯರ್ಥಿ ಹುಲಹಳ್ಳಿ ಶ್ರೀನಿವಾಸ್ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಅಣ್ಣಾಮಲೈ ಹಾಜರಿದ್ದರು. ಇತ್ತೀಚೆಗೆ ಮೇಕೆದಾಟು ಅಣೆಕಟ್ಟು ವಿಚಾರದಲ್ಲಿ ವಿರೋಧ ವ್ಯಕ್ತಪಡಿಸಿದ ವ್ಯಕ್ತಿಯನ್ನು ಆನೇಕಲ್ಗೆ ಕರೆ ತಂದಿದ್ದು ಏಕೆ ಎಂದು ಮಾಧ್ಯಮದವರು ಪ್ರಶ್ನಿಸಿದಾಗ ಕೇಂದ್ರ ಸಚಿವರು ಈ ರೀತಿ ಸಮರ್ಥಿಸಿಕೊಂಡರು.
ಬಿಜೆಪಿ ಪಕ್ಷದಲ್ಲಿ ಒಂಬತ್ತು ಜನ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಂತಿಮವಾಗಿ ಹುಲ್ಲಹಳ್ಳಿ ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ಕೆಲ ಗೊಂದಲಗಳು ಸೃಷ್ಟಿಯಾಗಿದ್ದು, ಅತೃಪ್ತರನ್ನು ಜೊತೆಗೂಡಿಸಿಕೊಂಡು ಕರೆದೊಯ್ಯುವ ಕೆಲಸ ಮಾಡುತ್ತೇವೆ. ಈ ಬಾರಿ ಚುನಾವಣೆಯಲ್ಲಿ ನೂರಕ್ಕೆ ನೂರು ಬಿಜೆಪಿ ಪಕ್ಷವನ್ನು ಅಧಿಕಾರ ತರುವಲ್ಲಿ ನಾವು ಯಶಸ್ವಿ ಆಗುತ್ತೇವೆ ಎಂದು ಕೇಂದ್ರ ಸಚಿವ ನಾರಾಯಣ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದರು.
ಬಿಜೆಪಿ ಅಭ್ಯರ್ಥಿ ಹುಲಹಳ್ಳಿ ಶ್ರೀನಿವಾಸ್ ಮಾತನಾಡಿ, ನಾನು ಒಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತ. ಡ್ರೈವರ್ ಕೆಲಸ ಮಾಡಿಕೊಂಡಿದ್ದ ನನ್ನನ್ನು ಬಿಜೆಪಿ ಪಕ್ಷದಲ್ಲಿ ಗುರುತಿಸಿ ಅಭ್ಯರ್ಥಿಯನ್ನಾಗಿ ಮಾಡಿದ್ದಕ್ಕೆ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಜನರ ಸೇವೆ ಮಾಡಲು ಒಂದು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ನಾಮಪತ್ರ ಸಲ್ಲಿಕೆ ವೇಳೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಹಾಗೂ ಅಣ್ಣಾಮಲೈ ಸಾತ್ ನೀಡಿದರು. ಇದಕ್ಕೂ ಮುನ್ನ ಬೆಂಬಲಿಗರ ಜೊತೆಗೂಡಿ ವೆಂಕಟೇಶ್ವರ ಟಾಕೀಸ್ನಿಂದ ಹಿಡಿದು ತಾಲೂಕು ಕಚೇರಿವರಿಗೆ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಸಾಂಸ್ಕೃತಿಕ ಕಲಾತಂಡಗಳು, ಡೊಳ್ಳು ಕುಣಿತ, ವೀರಗಾಸೆ, ಹೆಣ್ಣು ಮಕ್ಕಳು ಸಾಂಸ್ಕೃತಿಕ ಉಡುಗೆಗಳನ್ನು ತೊಟ್ಟು ಕಳಸಗಳನ್ನು ಹೊತ್ತು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.