ಮಾಲೂರಿನ ದೊಡ್ಡ ಕೆರೆ ಅಭಿವೃದ್ಧಿಗೆ ಯೋಜನೆ
ಮಾಲೂರು ಜೂ14: ಪಟ್ಟಣದ ಯೋಜನಾ ಪ್ರಾಧಿಕಾರದ ಕೆರೆ ಅಭಿವೃದ್ಧಿ ಶುಲ್ಕ ಹಾಗೂ ಸಾಮಾನ್ಯ ನಿಧಿಯಿಂದ ಸುಮಾರು 25 ಕೋಟಿ ರೂಪಾಯಿ ವೆಚ್ಚದಲ್ಲಿ ಪಟ್ಟಣದ ದೊಡ್ಡ ಕೆರೆ ಅಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಪಟ್ಟಣದ ಯೋಜನಾ ಪ್ರಾಧಿಕಾರದ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಆಡಳಿತಾಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರಾಧಿಕಾರದಲ್ಲಿ ಕೆರೆ ಅಭಿವೃದ್ಧಿ ಶುಲ್ಕ 19.50 ಲಕ್ಷ, ಸಾಮಾನ್ಯ ನಿಧಿ 4 ಕೋಟಿ 65 ಲಕ್ಷ ಸೇರಿದಂತೆ ಒಟ್ಟು 25 ಕೋಟಿಗೂ ಹೆಚ್ಚು ಹಣವಿದೆ. ಪಟ್ಟಣದ ಅಭಿವೃದ್ಧಿಗೆ ಈ ಹಣವನ್ನು ಮೀಸಲಿರಿಸಿ, ಏನೆಲ್ಲ ಅಭಿವೃದ್ಧಿ ಕೆಲಸಗಳು ಮಾಡಬೇಕು ಎಂಬುದನ್ನು ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ.
ಒಂದು ವಾರದೊಳಗೆ ಡಿಪಿಆರ್ ಹಾಗೂ ನೀಲಿ ನಕ್ಷೆ ಸಿದ್ಧಪಡಿಸಿ ಸಭೆಯಲ್ಲಿ ಅನುಮೋದಿಸಿ ಸರ್ಕಾರಕ್ಕೆ ಕಳುಹಿಸಿ ಸರ್ಕಾರದ ಅನುಮೋದನೆ ಪಡೆದ ನಂತರ ಈ ಹಿಂದೆ ಆಡಳಿತ ಮಂಡಳಿ ಮಾಡಿಕೊಂಡಿದ್ದ ಯೋಜನೆ ಬದಲಾವಣೆ ಮಾಡಿಕೊಂಡು ವಿಶೇಷವಾಗಿ ದೊಡ್ಡ ಕೆರೆಯನ್ನು ಅಭಿವೃದ್ಧಿಪಡಿಸಿ ಮಾದರಿ ಪಾರ್ಕ್, ವಾಕಿಂಗ್ ಟ್ರ್ಯಾಕ್, ರಸ್ತೆಗಳನ್ನು ನಿರ್ಮಿಸಲಾಗುವುದು ಎಂದರು.
ಪ್ರಾಧಿಕಾರದ ನಿಧಿ 5 ರಿಂದ 6 ಕೋಟಿ ರೂ.ಗಳ ವೆಚ್ಚದಲ್ಲಿ ಪಟ್ಟಣದ ಮುಖ್ಯ ರಸ್ತೆಯ ಮುಖ್ಯ ವೃತ್ತಗಳನ್ನು ಅಭಿವೃದ್ಧಿಪಡಿಸಲಾಗುವುದು. ಪರಿಶಿಷ್ಟ ಜಾತಿ – ಪರಿಶಿಷ್ಟ ಪಂಗಡದವರು ಹೆಚ್ಚು ವಾಸಿಸುವ ಬಡಾವಣೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಒಂದು ವಾರದೊಳಗೆ ಮತ್ತೊಂದು ಸಭೆ ಕರೆದು ಚರ್ಚಿಸಿ ಸಭೆಯ ಅನುಮೋದನೆ ಪಡೆದು, ಸರ್ಕಾರಕ್ಕೆ ಕಳುಹಿಸಿ ಈ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಎರಡು ತಿಂಗಳೊಳಗೆ ಪ್ರಾರಂಭಿಸಲಾಗುವುದು. ರಾಜ್ಯ ಸರ್ಕಾರ ಷಟ್ಪಥದ ರಸ್ತೆಗೆ ಈಗಾಗಲೇ ಹಣಕಾಸು ಇಲಾಖೆ ಅನುಮೋದಿಸಿದೆ. ದೇವನಹಳ್ಳಿ, ವಿಜಯಪುರ, ಎಚ್.ಕ್ರಾಸ್, ವೇಮಗಲ್ ನಿಂದ ಸಂಪಂಗೆರೆವರೆಗಿನ ರಸ್ತೆ ಮಾಲೂರು – ಹೊಸಕೋಟೆಯವರೆಗಿನ ರಸ್ತೆ 1823 ಕೋಟಿ ರೂ.ಗಳ ವೆಚ್ಚದಲ್ಲಿ 123 ಕಿಲೋಮೀಟರ್ ರಸ್ತೆ 6 ಪಥದ ರಸ್ತೆ ಅಭಿವೃದ್ಧಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗಲಿದೆ. ಅಲ್ಲದೆ, ರೈಲ್ವೆ ಸೇತುವೆ ಶಿಥಿಲಗೊಂಡಿದ್ದು 4 ಪಥದ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಉಪ ವಿಭಾಗಾಧಿಕಾರಿ ವೆಂಕಟಲಕ್ಷ್ಮಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ್, ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಹರಿನಾಥ್, ಸಹಾಯಕ ಇಂಜಿನಿಯರ್ ವೆಂಕಟೇಶ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ವೆಂಕಟೇಶ್, ಯೋಜನಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಕೃಷ್ಣಪ್ಪ, ಪುರಸಭಾ ಸದಸ್ಯರುಗಳಾದ ಇಮ್ತಿಯಾಜ್ ಖಾನ್, ಜಾಕೀರ್ಖಾನ್, ಪುರಸಭೆ ಮುಖ್ಯಾಧಿಕಾರಿ ಪ್ರದೀಪ್ ಕುಮಾರ್, ಪ್ರಾಧಿಕಾರದ ಸಿಬ್ಬಂದಿ ಇನ್ನಿತರರು ಹಾಜರಿದ್ದರು.