ಹುಮನಾಬಾದ್: ಪಟ್ಟಣದ ಹೊರವಲಯದಲ್ಲಿ ಬಸವತೀರ್ಥ ಮಠದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಜಮೀನಿನ ಉಳುಮೆಗಾಗಿ ಎರಡು ಟ್ರ್ಯಾಕ್ಟರ್ಗಳಿಗೆ ಪೂಜೆ ಸಲ್ಲಿಸಿದ ಬಳಿಕ ಸಿದ್ದಲಿಂಗ ಸ್ವಾಮೀಜಿ ಶುಕ್ರವಾರ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಹಾಗೂ ಬಳಿಕ ಜಮೀನು ವಿವಾದ ಸಂಬಂಧ ನಡೆದ ಗಲಾಟಗೆ ಸಂಬಂಧಿಸಿದಂತೆ ಸ್ವಾಮೀಜಿ ವಿರುದ್ಧ ಪ್ರತ್ಯೇಕ ದೂರು ದಾಖಲಾಗಿದೆ.
ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆಗೆ ಸಂಬಂಧಿಸಿದಂತೆ ನಾಗೇಶ್ ಕಲ್ಲೂರ್ ನೀಡಿದ ದೂರಿನ ಮೇರೆಗೆ ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಸಿದ್ದಲಿಂಗ ಸ್ವಾಮೀಜಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸ್ವಾಮಿಜಿ ಗುಂಡು ಹಾರಿಸಿದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು.
ಹಾಗೇ ಬಸವತೀರ್ಥ ಮಠದ ಸಮೀಪ ಜಮೀನು ವಿವಾದ ಸಂಬಂಧ ನಡೆದ ಗಲಾಟೆಗೆ ಸಂಬಂಧಿಸಿದಂತೆ ಸ್ವಾಮೀಜಿ ಸೇರಿದಂತೆ ಮೂವರ ವಿರುದ್ಧ ಜಾತಿ ನಿಂದನೆ, ಹಲ್ಲೆ, ಜೀವಬೆದರಿಕೆ ದೂರು ಚಿಟಗುಪ್ಪಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯಲ್ಲಿ ಕಲ್ಲೂರ್ ತಾಂಡಾದ ದಂಪತಿಗಳಾದ ಸೋಮಲು ಪವಾರ್ ಹಾಗೂ ಸುಶೀಲಾಬಾಯಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಒಬ್ಬರೇ ಸ್ವಾಮಿಜಿ ವಿರುದ್ಧ ಎರಡು ಪ್ರತ್ಯೇಕ ಠಾಣೆಗಳಲ್ಲಿ ಒಂದೇ ದಿನ ಪ್ರಕರಣ ದಾಖಲಾಗಿದ್ದು ಚರ್ಚೆಗೆ ಗ್ರಾಸವಾಗಿದೆ.