ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.28: ಪರಿಶಿಷ್ಟ ವರ್ಗಗಳಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿ, ವರ್ಗಗಳಿಗೆ ಇದುವರೆಗೂ ಪ್ರತ್ಯೇಕ ಸಚಿವಾಲಯ ಇರಲಿಲ್ಲ. ಸಚಿವಾಲಯ ಸ್ಥಾಪಿಸಿರುವುದರಿಂದ ಆ ವರ್ಗದ ಅಭಿವೃದ್ಧಿ ಸಾಧ್ಯವಾಗಲಿದೆ. ಎಸ್ಇಪಿ ಟಿಎಸ್ಪಿ ಹಣ ಆ ಸಮುದಾಯದ ಅಭಿವೃದ್ಧಿಗೆ ಖರ್ಚು ಆಗಬೇಕು. ಆರೇಳು ಸಾವಿರ ಕೋಟಿ ರೂ. ಇದ್ದ ಅನುದಾನವು ನಾನು ಮೊದಲ ಬಾರಿ ಅಧಿಕಾರದಿಂದ ಕೆಳಗಿಳಿಯುವ ವೇಳೆ 30 ಸಾವಿರ ಕೋಟಿ ರೂ. ಆಗಿತ್ತು. ಈಗ 34 ಸಾವಿರ ಕೋಟಿ ಹಣ ಅನುದಾನ ಇದೆ ಎಂದು ಹೇಳಿದರು.
ಹೆಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅನುದಾನ ಹೆಚ್ಚು ಆಗಲಿಲ್ಲ. ಶೇ. 24.1 ರಷ್ಟು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಜನಸಂಖ್ಯೆ ಇದ್ದಾರೆ, ಜನಸಂಖ್ಯೆಗೆ ಅನುಗುಣವಾಗಿ ಹಣ ಇಡಲಾಗುತ್ತದೆ ಎಂದರು.
ಇಡೀ ದೇಶದಲ್ಲಿ ಕರ್ನಾಟಕ ರಾಜ್ಯದಲ್ಲೇ ಹೆಚ್ಚು ಹಣ ಈ ವರ್ಗಗಳಿಗೆ ನೀಡಲಾಗಿದೆ. ಯಾವುದೇ ಸರ್ಕಾರ ಬಂದರೂ ಕಾನೂನು ಬದಲಾವಣೆ ಇಲ್ಲ. ನಾವು 88 ಸಾವಿರ ಕೋಟಿ ರೂ. ಈ ವರ್ಗಗಳಿಗೆ ಖರ್ಚು ಮಾಡಿದ್ದೇವೆ. ಇದಕ್ಕೆ ನೀವು ಅರ್ಹರು ಹಾಗಾಗಿ ಖರ್ಚು ಮಾಡಿದ್ದೇವೆ ಎಂದು ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಪ್ರತಿ ಸಾಧಕರಿಗೆ ರೂ. 5 ಲಕ್ಷ ನಗದು ಮತ್ತು 20 ಗ್ರಾಂ ಚಿನ್ನದ ಪದಕ ನೀಡಿ ಗೌರವಿಸಲಾಯಿತು.
ಇದೇ ವೇಳೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಪ್ರತ್ಯೇಕ ಸಚಿವಾಲಯಕ್ಕೆ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ಮಾಡುವ ಮೂಲಕ ಮುಖ್ಯಮಂತ್ರಿ ಚಾಲನೆ ನೀಡಿದರು. ಬಳಿಕ ರಿಮೋಟ್ ಒತ್ತುವುದರ ಮೂಲಕ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನೂತನ ಸಚಿವಾಲಯದ ಕೊಠಡಿಯನ್ನು ಉದ್ಘಾಟಿಸಿದರು.
ಹಲವು ದಿನಗಳ ಕನಸು:
ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಮಾತನಾಡಿ, ಪರಿಶಿಷ್ಟ ವರ್ಗಗಳಿಗೆ ಪ್ರತ್ಯೇಕ ಸಚಿವಾಲಯ ಆಗಬೇಕು ಎಂಬುದು ಹಲವು ದಿನಗಳ ಕನಸು. ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಅದನ್ನು ನನಸು ಮಾಡಿದ್ದಾರೆ. ತಳ ಸಮುದಾಯಗಳನ್ನು ಎತ್ತಿಹಿಡಿಯುವ ಛಲ ಸಿದ್ದರಾಮಯ್ಯ ಅವರಿಗೆ ಮಾತ್ರ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದಾದ್ಯಂತ ಸುಮಾರು 70 ಲಕ್ಷ ವಾಲ್ಮೀಕಿ ಸಮುದಾಯದವರು ಇದ್ದಾರೆ. ಎಲ್ಲರೂ ಒಗ್ಗಟ್ಟಾಗುವ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಬಲ ಪ್ರದರ್ಶನ ಮಾಡಬೇಕು ಎಂದು ಹೇಳಿದರು.
ಸಚಿವ ಕೆ.ಎನ್. ರಾಜಣ್ಣ ಮಾತನಾಡಿ, ಸಮಾಜದ ಒಗ್ಗಟ್ಟು ಕೇವಲ ಭಾಷಣಗಳಿಗೆ ಸೀಮಿತವಾಗಬಾರದು. ಅದನ್ನು ಮೀರಿ ಒಗ್ಗಟ್ಟು ಪ್ರದರ್ಶಿಸಬೇಕು. ವಾಲ್ಮೀಕಿ ಜಯಂತಿ ಮೂಲಕ ಹೆಚ್ಚೆಚ್ಚು ಸಂಘಟನೆ ಆಗಬೇಕು. ಅಲ್ಲದೆ, ನಮಗಿಂತಲೂ ಕೆಟ್ಟ ಪರಿಸ್ಥಿತಿಯಲ್ಲಿರುವ ಸಮುದಾಯಗಳನ್ನು ಮುನ್ನೆಲೆಗೆ ತರುವ ಮೂಲಕ ನಾವು ನಾಯಕರಾಗಬೇಕು ಹೊರತು ಕೇವಲ ಜಾತಿ ನಾಯಕರಾಗಬಾರದು ಎಂದು ಹೇಳಿದರು.
ಹಾಸ್ಟೆಲ್ಗಳ ಸಂಖ್ಯೆ ಹೆಚ್ಚಲಿ:
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ವಾಲ್ಮೀಕಿ ಸಮುದಾಯದವರು ರಾಜಕೀಯ ಸಾಧಿಸಿರಬಹುದು. ಆದರೆ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಇನ್ನೂ ಹಿಂದೆ ಇದ್ದಾರೆ. ಪ್ರತಿ ಜಿಲ್ಲಾ ಮತ್ತು ತಾಲ್ಲೂಕುಗಳಲ್ಲಿ ಪರಿಶಿಷ್ಟ ವರ್ಗದ ಹಾಸ್ಟೆಲ್ಗಳು ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಸಚಿವ ನಾಗೇಂದ್ರ ಅವರು ಇಲಾಖೆ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಸಮುದಾಯದವರ ಶಿಕ್ಷಣ ಬೆಳವಣಿಗೆಗೆ ಹೆಚ್ಚಿನ ಗಮನ ವಹಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜನಹಳ್ಳಿಯ ಮಹರ್ಷಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್.ಸಿ.ಮಹದೇವಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಶಾಸಕ ನರೇಂದ್ರಸ್ವಾಮಿ, ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್, ಮಾಜಿ ಸಚಿವ ಆಂಜನೇಯ, ಮಾಜಿ ಸಂಸದರಾದ ಚಂದ್ರಪ್ಪ, ವಿ.ಎಸ್. ಉಗ್ರಪ್ಪ, ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಮೇಜರ್ ಮಣಿವಣ್ಣನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.