ಸುದ್ದಿಮೂಲ ವಾರ್ತೆ
ಪಾಟ್ನಾ, ಜೂ.23: ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಬಿಜೆಪಿಯೇತರ ಪಕ್ಷಗಳು ಒಗ್ಗಟ್ಟಿನ ಬಲ ಪ್ರದರ್ಶಿಸಲು ಮುಂದಾಗಿವೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಪಾಟ್ನಾದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ಗಾಂಧಿ ಸಹಿತ 17 ಪಕ್ಷಗಳ ನಾಯಕರು ಪಾಲ್ಗೊಳ್ಳುವ ಮೂಲಕ ಬಲ ಪ್ರದರ್ಶನ ಮಾಡಿದರು.
ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕಾದರೆ ಎಲ್ಲಾ ಪಕ್ಷಗಳೂ ಒಮ್ಮತದಿಂದ ಹೋಗುವುದು ಅಗತ್ಯವಿದೆ ಎಂದು ಎಲ್ಲಾ ನಾಯಕರು ಒತ್ತಿ ಹೇಳಿದರು. ಸುಮಾರು ನಾಲ್ಕು ತಾಸುಗಳ ಕಾಲ ನಡೆದ ಸಭೆಯಲ್ಲಿ ತಮ್ಮ ತಮ್ಮ ಸಿದ್ಧಾಂತಗಳನ್ನು ಬಿಟ್ಟು ದೇಶಕ್ಕಾಗಿ ಒಂದುಗೂಡಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ಗಾಂಧಿ, ಬಿಜಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಸಿಂಗ್ ಠಾಕ್ರೆ, ಎನ್ಸಿಪಿಯ ಶರದ್ ಪವಾರ್, ಜೆಜೆಎಂನ ಹೇಮಂತ್ ಸೊರೆನ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಸಿಪಿಐನ ಡಿ. ರಾಜಾ, ನ್ಯಾಷನಲ್ ಕಾನ್ಫರೆನ್ಸ್ನ ಫಾರೂಕ್ ಅಬ್ದುಲ್ಲಾ ಸಹಿತ ಹಲವರು ಪಾಲ್ಗೊಂಡಿದ್ದರು.
ಇದರಲ್ಲಿನ ಬಹುತೇಕ ನಾಯಕರು ಕಳೆದ ತಿಂಗಳು ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮಾಣ ವಚನದಲ್ಲಿ ಪಾಲ್ಗೊಳ್ಳುವ ಮೂಲಕ ಇಂತಹ ಒಗ್ಗಟ್ಟಿಗೆ ಮುನ್ನುಡಿ ಬರೆದಿದ್ದರು.
ಇಂದು ನಡೆದ ನಡೆದ ಸಭೆಯಲ್ಲಿ ಆಯಾ ರಾಜ್ಯಗಳಲ್ಲಿ ಪ್ರಭಾವ ಇರುವ ಪಕ್ಷಗಳ ಸೀಟು ಹಂಚಿಕೆಯ ಕುರಿತು ಸಹ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದರ ಬಗ್ಗೆ ಪ್ರಾಥಮಿಕ ಚರ್ಚೆಗಳು ಶುರುವಾಗಿದ್ದು, ಮುಂದಿನ ಸಭೆಗಳಲ್ಲಿ ಅಂತಿಮಗೊಳ್ಳುತ್ತಾ ಹೋಗಲಿದೆ.
ಶಿಮ್ಲಾದಲ್ಲಿ ಮತ್ತೊಂದು ಸಭೆ:
ಸಭೆ ಬಳಿಕ ವಿವರ ನೀಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಇಂದಿನ ಸಭೆಯಲ್ಲಿ ಕಾಂಗ್ರೆಸ್ ಸಹಿತ ದೇಶದ ವಿವಿಧ ರಾಜ್ಯಗಳಲ್ಲಿ ಪ್ರಭಾವ ಹೊಂದಿರುವಂತಹ 17 ಪಕ್ಷಗಳ ನಾಯಕರು ಭಾಗಿಯಾಗಿದ್ದರು. ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅನೇಕ ವಿಷಯಗಳನ್ನು ಚರ್ಚಿಸಲಾಗಿದೆ. ಮುಖ್ಯವಾಗಿ ಬಿಜೆಪಿಯನ್ನು ಅಧಿಕಾರದಿಂದ ತೆಗೆಯಲು ನಾವೆಲ್ಲರೂ ಒಗ್ಗಟ್ಟಾಗುವುದು ಅಗತ್ಯ ಎಂಬ ಮನವರಿಕೆ ಎಲ್ಲರಿಗೂ ಇದೆ ಎಂದು ಹೇಳಿದರು.
ನಾವು ರಾಷ್ಟ್ರೀಯ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ದೇಶದ ಇತಿಹಾಸವನ್ನು ತಿರುಚಲು ಪ್ರಯತ್ನಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ನಿತೀಶ್ ಕುಮಾರ್ ಆರೋಪಿಸಿದರು.
ಜುಲೈ 10ರ ಸುಮಾರಗೆ ಶಿಮ್ಲಾದಲ್ಲಿ ಮತ್ತೊಂದು ಸಭೆಯನ್ನು ನಡೆಸಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ಕಾರ್ಯಸೂಚಿಗಳನ್ನು ಸಿದ್ಧಪಡಿಸುತ್ತೇವೆ. ಲೋಕಸಭಾ ಚುನಾವಣೆಗೆ ಪಕ್ಷವಾರು ಟಿಕೆಟ್ ಹಂಚಿಕೆಯಂತಹ ಅಲ್ಲಿ ಚರ್ಚೆಯಾಗಬಹುದು ಎಂದು ನಿತೀಶ್ ಕುಮಾರ್ ಹೇಳಿದರು.
ಕೇಜರಿವಾಲ್ ಅಸಮಾಧಾನ
ದೆಹಲಿ ಸರ್ಕಾರದ ಮೇಲಿನ ಕೇಂದ್ರ ಸರ್ಕಾದ ಸುಗ್ರೀವಾಜ್ಞೆಗಳನ್ನು ರಾಜ್ಯಸಭೆಯಲ್ಲಿ ಎಲ್ಲಾ 11 ಪಕ್ಷಗಳು ಖಂಡಿಸಿ ತಮ್ಮ ನಿಲುವನ್ನು ವ್ಯಕ್ತಪಡಿಸಿವೆ. ಆದರೆ, ಕಾಂಗ್ರೆಸ್ ಇದನ್ನು ಆಕ್ಷೇಪಿಸಿಲ್ಲ ಎಂದು ಕೇಜರಿವಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಸಭೆಯಲ್ಲಿ ಪಾಲ್ಗೊಂಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಲಿಲ್ಲ. ಮುಂದಿನ ದಿನಗಳಲ್ಲಿ ಈ ಒಕ್ಕೂಟದಲ್ಲಿ ಕೇಜರಿವಾಲ್ ಮುಂದುವರಿಯುವುದು ಅನುಮಾನ ಎಂದು ಹೇಳಲಾಗುತ್ತಿದೆ.
ಅಭಿಪ್ರಾಯಗಳು:
ನಮ್ಮಲ್ಲಿ ಕೆಲವು ಭಿನ್ನಾಭಿಪ್ರಾಯಗಳಿರಬಹುದು. ಆದರೆ, ಇದು ಸಿದ್ಧಾಂತಗಳ ಹೋರಾಟವಾಗಿವೆ. ಆದರೆ ಪರಸ್ಪರ ಅರ್ಥ ಮಾಡಿಕೊಂಡು ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ ಮತ್ತು ನಮ್ಮ ಸಿದ್ಧಾಂತವನ್ನು ರಕ್ಷಿಸಲು ಕೆಲಸ ಮಾಡುತ್ತೇವೆ.
– ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
2024ರಲ್ಲಿ ನಾವು ಒಟ್ಟಾಗಿ ಚುನಾವಣೆ ಎದುರಿಸಬೇಕು. ಬಿಜೆಪಿಯನ್ನು ಕಿತ್ತೊಗೆಯಲು ನಾವು ನಿರ್ಧರಿಸಿದ್ದೇವೆ. ಪ್ರತಿ ರಾಜ್ಯಕ್ಕೂ ಪ್ರತ್ಯೇಕ ಯೋಜನೆ ರೂಪಿಸಬೇಕು ಮತ್ತು ಬಿಜೆಪಿಯನ್ನು ಇಳಿಸಿಲು ಒಟ್ಟಾಗಬೇಕು. ಮುಂದಿನ ಸರ್ಕಾರ ರಚಿಸುವ ವಿಶ್ವಾಸವಿದೆ.
– ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಪಾಟ್ನಾದಿಂದ ಏನೇ ಆರಂಭವಾದರೂ ಅದು ಸಾರ್ವಜನಿಕ ಚಳುವಳಿಯ ರೂಪ ಪಡೆದುಕೊಳ್ಳುತ್ತದೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಮತ್ತು ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಡುತ್ತೇವೆ. ಬಿಜೆಪಿ ಇತಿಹಾಸವನ್ನು ತಿರುಚಲು ಬಯಸುತ್ತದೆ. ಆದರೆ ನಾವು ಇತಿಹಾಸವನ್ನು ಉಳಿಸುತ್ತೇವೆ
– ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ
ನಾವು ದೇಶವನ್ನು ವಿನಾಶದಿಂದ ರಕ್ಷಿಸಲು ಮತ್ತು ಪ್ರಜಾಪ್ರಭುತ್ವವನ್ನು ಮರಳಿ ತರಲು ಭೇಟಿಯಾಗಿದ್ದೇವೆ.
– ಒಮರ್ ಅಬ್ದುಲ್ಲಾ, ಎನ್ಸಿಪಿ ನಾಯಕ