ಸುದ್ದಿಮೂಲ ವಾರ್ತೆ
ಬಾಗೇಪಲ್ಲಿ,ನ.5: ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಪಟ್ಟಣದ ಪತ್ರಕರ್ತರಿಗೆ ನೀಡಲು ಮೀಸಲಿಟ್ಟಿದ್ದ ಸ್ಥಳವನ್ನು ನಿಯಮಬಾಹಿರವಾಗಿ ಅನ್ಯರಿಗೆ ದುರಸ್ಥಿ ಮಾಡಿಕೊಟ್ಟಿರುವುದರಿಂದ ಕೆರಳಿದ ಪತ್ರಕರ್ತರು ಭೂಮಾಪನ ಇಲಾಖೆಯ ಕಚೇರಿ ಮುಂದೆ ಧರಣಿ ಮಾಡಿ ತಮ್ಮ ಆಕ್ರೋಶವ್ಯಕ್ತಪಡಿಸಿದ ಘಟನೆ ನಡೆದಿದೆ.
ಪಟ್ಟಣಕ್ಕೆ ಸಮೀಪದ ಸರ್ವೆ ನಂ 44 ರಲ್ಲಿ ಪತ್ರಕರ್ತರ ನಿವೇಶನಗಳಿಗೆ ಸ್ಥಳವನ್ನು ಮೀಸಲು ಇಟ್ಟು 2019 ರಲ್ಲಿ ಭೂಮಾಪನ ಇಲಾಖೆಯ ಸರ್ವೆಯರ್ ಸ್ಕೆಚ್ ಮಾಡಿಕೊಟ್ಟಿದ್ದು, ಅದರಂತೆ ಸರ್ಕಾರದ ನಿಯಮಾವಳಿಗಳ ಪ್ರಕಾರ ಸರ್ಕಾರದ ಮಟ್ಟದಲ್ಲಿ ನಿವೇಶನಗಳ ಮಂಜೂರಾತಿಗೆ ಪ್ರಕ್ರಿಯೆ ನಡೆಯುತ್ತಿದೆ.
ಒಂದಲ್ಲ ಒಂದು ಕುಂಟು ನೆಪಗಳನ್ನು ಮುಂದಿಟ್ಟುಕೊಂಡು ನಿವೇಶನಗಳ ಕಡತವನ್ನು ವಾಪಸ್ಸು ಮಾಡುತ್ತಲೇ ನಾಲ್ಕು ವರ್ಷಗಳನ್ನು ಕಳೆಯಲಾಗಿದೆ. ಆದರೆ ಸರ್ವೆ ನಂ 44 ರಲ್ಲಿ ಕಳೆದ ತಿಂಗಳವರೆಗೂ ಸರ್ಕಾರಿ ಭೂಮಿ ಎಂದು ಬರುತ್ತಿದ್ದ ಪಹಣಿ. ಇಂದು ಏಕಾ ಏಕಿ ಖಾಸಗಿ ವ್ಯಕ್ತಿಗಳ ಹೆಸರು ಪಹಣಿಯಲ್ಲಿ ಕಾಣಿಸಿಕೊಂಡಿದೆ. ಇದನ್ನ ತಿಳಿದ ಪತ್ರಕರ್ತರು ಎಡಿಎಲ್ಆರ್ ಕಚೇರಿ ಮುಂದೆ ತಡ ರಾತ್ರಿಯ ವರೆಗು ಧರಣಿ ಮಾಡಿದ್ದಾರೆ. ಸನಂ 44 ಅನ್ನು ದುರಸ್ತಿ ಮಾಡಿ ಹೊಸ ನಂಬರ್ ಸೃಷ್ಟಿ ಮಾಡಿ ಬೇರೆಯವರಿಗೆ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಅಧಿಕಾರಿಗಳ ಹಣದಾಹ ಪತ್ರಕರ್ತರ ನಿವೇಶನಗಳ ಕನಸಿನ ಆಸೆಗೆ ಎಳ್ಳು ನೀರು ಬಿಟ್ಟಂತಾಗಿದ್ದು ಇದರಿಂದ ಪತ್ರಕರ್ತರನ್ನು ಕೆರಳಿ ಕೆಂಡವಂತೆ ಮಾಡಲಾಗಿದೆ. ಇದರ ಪರಿಣಾಮ ನಿನ್ನೆ ಮದ್ಯಾಹ್ನವೇ ಎಡಿಎಲ್ಆರ್ ಕಚೇರಿಗೆ ಆಗಮಿಸಿದ ಪತ್ರಕರ್ತರು ತಮಗೆ ಮೀಸಲಿಟ್ಟಿರುವ ಸ್ಥಳವನ್ನು ನಮಗೆ ತೋರಿಸುವಂತೆ ಪಟ್ಟುಹಿಡಿದರು. ಹಣಕ್ಕಾಗಿ ಸರ್ಕಾರಿ ಭೂಮಿಯನ್ನು ಮಾರಾಟ ಮಾಡಿಕೊಳ್ಳಲಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.