ಸುದ್ದಿಮೂಲ ವಾರ್ತೆ
ಹೊಸಕೋಟೆ,ನ.22 : ತಾಲೂಕಿನ ತಾವರೆಕೆರೆ ಗ್ರಾಮ ಪಂಚಾಯಿತಿಯ ಯಳಚಹಳ್ಳಿ ಕಾಳಪ್ಪನಹಳ್ಳಿ ಗ್ರಾಮದ ಜನತೆ ತಮ್ಮ ಊರಿಗೆ ಸರ್ಕಾರಿ ಬಸ್ಸು ಸೇವೆ ಇದ್ದು. ಇಲ್ಲದಂತಾಗಿದೆ.
ಲ್ಯಾಂಕೋ ಕಂಪನಿಯವರು ರಾಷ್ಟ್ರೀಯ ಹೆದ್ದಾರಿ ಎನ್ಎಚ್-75ರ ನಿರ್ಮಾಣ ಮಾಡುವ ಸಂದರ್ಭದಲ್ಲಿ ಕೆಲವು ಗ್ರಾಮಗಳ ಹತ್ತಿರ ಸರ್ವೀಸ್ ರಸ್ತೆ ಮಾಡಿ ಜನತೆಗೆ ಅನುಕೂಲ
ಮಾಡಿಕೊಟ್ಟಿದ್ದಾರೆ. ಆದರೆ, ಯಾವೊಂದು ಸರ್ಕಾರಿ ಬಸ್ಸು ಗ್ರಾಮದ ಸರ್ವೀಸ್ ರಸ್ತೆಯಲ್ಲಿ ಬರದೆ ಜನಕ್ಕೆ ತೊಂದರೆಯಾಗುತ್ತಿದೆ.
ಈ ಗ್ರಾಮದ ಬಳಿ ಮೇಲ್ಸೇತುವೆ ಇದ್ದು, ವಾಹನಗಳೆಲ್ಲಾ ಇದರ ಮುಖಾಂತರ ಚಲಿಸುತ್ತವೆ. ಜನತೆ ಬೇರೆ ಊರುಗಳಿಗೆ ಪ್ರಯಾಣ ಮಾಡಲು ಹರಸಹಾಸ
ಪಡಬೇಕಾಗುತ್ತದೆ. ಯಳಚಹಳ್ಳಿ ಗ್ರಾಮದಿಂದ 2 ಕಿ.ಮೀ ದೂರದ ತಾವರೆಕೆರೆಗೆ ಇಲ್ಲದೆ 1 ಕಿ.ಮೀ ಚಿಕ್ಕನಹಳ್ಳಿ ಗೇಟ್ಗೆ ಪ್ರಯಾಣ ಮಾಡಬೇಕಾಗುತ್ತದೆ. ಬಸ್ಸುಗಳು ಕೆಳಗಡೆ ಬರದೆ ಇರುವುದಕ್ಕೆ ಕಾರಣವೆಂದರೆ, ಈ ಗ್ರಾಮದ ಕೆಲವು ಜನರು ಗುಜುರಿ ಸಾಮಾನುಗಳನ್ನ ಎತ್ತೇಚ್ಛವಾಗಿ ಸರ್ವೀಸ್ ರಸ್ತೆಯಲ್ಲಿ ಹಾಕಿರುತ್ತಾರೆ.
ಕೆಲವೊಂದು ಮೇಟೋಡರ್ ವಾಹನಗಳನ್ನು ಈ ರಸ್ತೆಯಲ್ಲಿಯೇ ಸಾಲಾಗಿ ನಿಲ್ಲಿಸಿರುತ್ತಾರೆ. ಈ ಕಾರಣದಿಂದ ಬಸ್ಸು ಸಂಚರಿಸಲು ತೊಂದರೆಯಾಗುತ್ತದೆ. ಕೆಲವೊಂದು ವೇಳೆ ಅಪಘಾತಗಳು ತುರ್ತಾಗಿ ಕಾಯಿಲೆ ಇರುವವರನ್ನ ಸಾಗಿಸಲು ಆಂಬ್ಯುಲೆನ್ಸ್ ಊರಿನ ಒಳಗಡೆ ಬಂದು ಹೋಗಲು ತೊಂದರೆಯಾಗಿ ಅನೇಕ ಸಾವುಗಳು ಸಂಭವಿಸಿದ ಉದಾಹರಣೆಯುಂಟು.
ಅದುಅಲ್ಲದೇ ಮೇಲ್ಸೇತುವೆ ಮೂಲಕಬಸ್ಸುಗಳು ಸಂಚಾರ ಮಾಡುತ್ತವೆ ಎಂದು ಗ್ರಾಮದ ಜನತೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ವೃದ್ಧರು ಅನಾರೋಗ್ಯ ಪೀಡಿತರು ಬಸ್ಸು ಇಲ್ಲದೆ ನಡೆದುಕೊಂಡು ದೂರದ ಬಸ್ಸು ನಿಲ್ದಾಣಗಳಿಗೆ ಹೋಗಬೇಕಾಗುತ್ತದೆ. ಶಾಲಾ ಕಾಲೇಜಿಗೆ ಕೋರ್ಟ್ ಕಛೇರಿಗೆ ಆಸ್ಪತ್ರೆಗಳಿಗೆ ಪ್ರಯಾಣ ಮಾಡುವ ಪ್ರಯಾಣಿಕರ ಸಾಹಸ ಹೇಳತೀರದು.
ಕೆಲವೊಂದು ಕೆಎಸ್ಆರ್ಟಿಸಿ ಬಸ್ಸುಗಳು ಫ್ಲೈ ಓವರ್ ನಿಂದ ಕೆಳಗಡೆ ಬರದೆ ಮೇಲೆಯೇ ಚಲಿಸುತ್ತವೆ. ಸರಿಯಾದ ಸಮಯಕ್ಕೆ ಬಸ್ಸಿಲ್ಲದೆ ಒಂದೊಂದು ದಿನ ಮನೆಗೆ ಹೋಗಬೇಕಾಗುತ್ತದೆ.
ಆದ್ದರಿಂದ ಸಂಬಂಧಪಟ್ಟ ಲ್ಯಾಂಕೋ ಅಧಿಕಾರಿಗಳು ಈ ಗುಜುರಿ ಸಾಮಾನುಗಳನ್ನು ತೆಗೆಸಿ ಬಸ್ಸುಗಳು ಕೆಳಗಡೆ ಬರುವಂತೆ ಮಾಡಬೇಕು ಎಂದು ಗ್ರಾಮದ ರಮೇಶ್ ಯಳಚಹಳ್ಳಿ ಒತ್ತಾಯಿಸಿದ್ದಾರೆ.