ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 22: ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾದಂತಹ ಜನಪ್ರತಿನಿಧಿಗಳು ಸೋಮವಾರದಿಂದ ಆರಂಭವಾಗಿರುವುವ ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಹಂಗಾಮಿ ಸಭಾಧ್ಯಕ್ಷ ಆರ್ ವಿ ದೇಶಪಾಂಡೆ ಅವರು ಕಾಂಗ್ರೆಸ್ ಸರ್ಕಾರ ಮೊದಲ ಅಧಿವೇಶನಕ್ಕೆ ಚಾಲನೆ ನೀಡಿದರು. ಚುನಾಯಿತರಾಗಿ ಆಯ್ಕೆಯಾದ ಎಲ್ಲ ಶಾಸಕರಿಗೆ ಸ್ವಾಗತಕೋರಿ, ಪ್ರಮಾಣ ವಚನ ಸ್ವೀಕಾರಕ್ಕೆ ಅನುವು ಮಾಡಿಕೊಟ್ಟರು.
ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಗವಂತನ ಹೆಸರಿನಲ್ಲಿ ಶಾಸಕ ಸ್ಥಾನದ ಪ್ರಮಾಣ ವಚನ ಸ್ವೀಕರಿಸಿದರು. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೂಡ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಡಾ. ಜಿ ಪರಮೇಶ್ವರ ಮತ್ತು ಸತೀಶ್ ಜಾರಕಿಹೊಳಿ ಹಾಗೂ ಪ್ರಿಯಾಂಕಾ ಖರ್ಗೆ ಅವರು ಭಾರತದ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಯು ಟಿ ಖಾದರ್ ಅವರು ಭಗವಂತ ಮತ್ತು ಕ್ಷೇತ್ರದ ಮತದಾರರ ಮೇಲೆ ಪ್ರಮಾಣ ವಚನ ಸ್ವೀಕರಿಸಿದರು. ಕೆ ಎಚ್ ಮುನಿಯಪ್ಪ, ಕೆ ಜೆ ಜಾರ್ಜ್, ರಾಮಲಿಂಗಾರೆಡ್ಡಿ, ಎಂ ಬಿ ಪಾಟೀಲ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ವಿರೋಧ ಪಕ್ಷ ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅರವಿಂದ್ ಬೆಲ್ಲದ, ಆರ್ ಅಶೋಕ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ವಿಜಯಪುರದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಹಿಂದುತ್ವ ಮತ್ತು ಗೋಮಾತೆ ಹೆಸರಿನಲ್ಲಿ ಪ್ರಮಾಣ ಮಾಡಿದರು. ಹಾಗೆಯೇ ಜೆಡಿಎಸ್ನಿಂದ ಸಿ.ಎನ್. ಬಾಲಕೃಷ್ಣ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ವಿಧಾನಸಭೆಯ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಅವರು ನೂತನವಾಗಿ ಆಯ್ಕೆಯಾದ ಪ್ರತಿ ಶಾಸಕರನ್ನು ಕರೆದು ಪ್ರಮಾಣ ವಚನ ಸ್ವೀಕಾರ ಕಾರ್ಯ ನಡೆಸಿಕೊಟ್ಟರು.