ಸುದ್ದಿಮೂಲ ವಾರ್ತೆ
ಮಂಡ್ಯ, ಆ.25: ಹಿಂದೆ ʻಗುರುವಿಗೆ ಗುಲಾಮನಾಗುವ ತನಕ ತೆರೆಯದಣ್ಣ ಮುಕುತಿʼ ಎಂದು ಹೇಳಲಾಗುತ್ತದೆ. ಆದರೆ ಈಗ ʻವಿದ್ಯಾರ್ಥಿಗಳಿಗೆ ಶರಣಾಗದಿದ್ದರೆ ಉಳಿಯದಣ್ಣ ಮೂತಿʼ ಎಂದು ಹೇಳುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕಾಲೇಜಿನಲ್ಲಿ ನಡೆದಿರುವ ಘಟನೆಯೇ ಸಾಕ್ಷಿ.
ನಾಗಮಂಗಲ ತಾಲೂಕಿನ ಬಿ.ಜಿ.ನಗರದ ಡಿಪ್ಲೊಮೋ ಕಾಲೇಜಿನಲ್ಲಿ ತರಗತಿಗೆ ಚಕ್ಕರ್ ಹೊಡೆಯುತ್ತಿದ್ದಾನೆ ಎಂದು ತನ್ನ ಬಗ್ಗೆ ಹೆತ್ತವರಿಗೆ ದೂರು ನೀಡಿದ್ದಕ್ಕೆ ವಿದ್ಯಾರ್ಥಿಯೊಬ್ಬ ಉಪನ್ಯಾಸಕರಿಗೆ ಲಾಂಗ್ ತೋರಿಸಿ ದರ್ಪ ಮೆರೆದಿದ್ದಾನೆ.
ವಿದ್ಯಾರ್ಥಿ ಉದಯ್ ಗೌಡ (18) ಎಂಬ ವಿದ್ಯಾರ್ಥಿ ಸರಿಯಾಗಿ ತರಗತಿಗೆ ಹಾಜರಾಗುತ್ತಿರಲಿಲ್ಲವಂತೆ. ಹೀಗಾಗಿ ಉಪನ್ಯಾಸಕ ಚಂದನ್ ಅವರು, ಉದಯ್ ಕ್ಲಾಸಿಗೆ ಸರಿಯಾಗಿ ಬರುತ್ತಿಲ್ಲವೆಂದು ಆತನ ಪೋಷಕರಿಗೆ ದೂರು ನೀಡಿದ್ದರು. ಇದರಿಂದ ಕೋಪಗೊಂಡ ವಿದ್ಯಾರ್ಥಿ ಉದಯ್ ಗೌಡ ಈ ರೀತಿ ಲಾಂಗ್ ತೋರಿಸಿದ್ದಾನೆ ಎಂದು ದೂರಲಾಗಿದೆ.
ಈ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತದನಂತರ ಆತನನ್ನು ತಂದೆ ತಾಯಿಯವರ ಸಮ್ಮುಖದಲ್ಲಿ ಬುದ್ಧಿ ಮಾತು ಹೇಳಿ ಠಾಣೆಯಿಂದ ಕಳುಸಿಕೊಡಲಾಗಿದೆ. ಪೋಷಕರು ಮತ್ತು ಪೊಲೀಸರೆದುರು ತಾನು ಇನ್ನು ಮುಂದೆ ಇಂತಹ ತಪ್ಪನ್ನು ಮಾಡುವುದಿಲ್ಲ ಎಂದು ವಿದ್ಯಾರ್ಥಿ ಪ್ರತಿಜ್ಞೆ ಮಾಡಿದ್ದಾನೆಂದು ತಿಳಿದು ಬಂದಿದೆ. ವಿದ್ಯಾರ್ಥಿಯ ಈ ವರ್ತನೆಯಿಂದ ಇಡಿ ಕಾಲೇಜಿನಲ್ಲಿ ಆತಂಕ ಸೃಷ್ಟಿಯಾಗಿತ್ತು.