ಸುದ್ದಿಮೂಲ ವಾರ್ತೆ
ಬೆಂಗಳೂರು, ಆ.16: ಮಳೆ ಕೊರತೆ ಮತ್ತು ಕಳೆದ ವರ್ಷದ ಅಕಾಲಿಕ ಮಳೆಯ ಹೊಡೆತದಿಂದ ಅಕ್ಕಿಯ ಬೆಲೆ ಏರಿಕೆಯಾಗಿದೆ. ಬೆಂಗಳೂರು ಸಹಿತ ರಾಜ್ಯದ ಹಲವೆಡೆ ಜುಲೈ ಎರಡನೇ ವಾರದಿಂದ ಅಕ್ಕಿ ದರದಲ್ಲಿ ಸಾಕಷ್ಟು ಏರಿಕೆಯಾಗುತ್ತಿರುವುದು ಕಂಡುಬರುತ್ತಿದೆ.
ಸೋನಾ ಮಸೂರಿ ಅಕ್ಕಿಯ ಹೋಲ್ ಸೇಲ್ ಬೆಲೆ ಪ್ರತಿ ಕೆಜಿಗೆ ರೂ. 50 ರಿಂದ – 60 ರೂಗೆ ಏರಿಕೆಯಾಗಿದ್ದು, ರಿಟೇಲ್ ದರ ಸಾಮಾನ್ಯವಾಗಿ ಹೋಲ್ ಸೇಲ್ ಬೆಲೆಗಿಂತ ಕನಿಷ್ಠ ಶೇ.10 ಹೆಚ್ಚಿರುತ್ತದೆ. ದಕ್ಷಿಣ ಕರ್ನಾಟಕದ ಜನಪ್ರಿಯ ರಾಜಮುಡಿ ಅಕ್ಕಿ ಕೆ.ಜಿಗೆ ರೂ. 62 ರಿಂದ ರೂ. 64 ಇತ್ತು. ಆದರೆ ಈಗ ರೂ. 70 ರಿಂದ ರೂ. 74 ತಲುಪಿದೆ.
ಕಳೆದ ಕೆಲವು ವಾರಗಳಿಂದ ಅಕ್ಕಿಯ ಬೆಲೆಯು ಸರಾಸರಿ ಶೇ. 15 ರಷ್ಟು ಏರಿಕೆ ಕಂಡಿದೆ. ಅದರಲ್ಲೂ ಇಡೀ ಏಷ್ಯಾದಲ್ಲಿ ಅಕ್ಕಿ ಬೆಲೆ ದಾಖಲೆ ಏರಿಕೆಯಾಗಿದೆ. ಕಳೆದ 15 ವರ್ಷಗಳಲ್ಲಿ ಅತಿ ಹೆಚ್ಚಿನ ಮಟ್ಟಕ್ಕೆ ಜಿಗಿದಿದೆ.
ಪ್ರಧಾನವಾಗಿ ಸೇವಿಸುವ ಪ್ರದೇಶಗಳಲ್ಲಿನ ಅಕ್ಕಿ ಜನರಿಗೆ ಅಕ್ಕಿ ದರ ಏರಿಕೆ ಶಾಕ್ ಕೊಟ್ಟಿದೆ. ಕಳೆದ ವರ್ಷ ಭಾರೀ ಮಳೆಯಿಂದಾಗಿ ಅಕ್ಕಿ ಉತ್ಪಾದನೆ ಕಡಿಮೆಯಾಗಿದೆ.
ಯಶವಂತಪುರ ಎಪಿಎಂಸಿ ಯಾರ್ಡ್ ಸಮನ್ವಯ ಸಮಿತಿ ಅಧ್ಯಕ್ಷ ರಮೇಶ್ ಚಂದ್ರ ಲಾಹೋಟಿ ಮಾತನಾಡಿ, ಈ ವರ್ಷ ಮುಂಗಾರು ಮಳೆ ವಿಳಂಬ ಮತ್ತು ಭತ್ತದ ಕನಿಷ್ಠ ಬೆಂಬಲ ಬೆಲೆಯಲ್ಲಿ ಸಾಮಾನ್ಯ ಏರಿಕೆಯು ಅಕ್ಕಿ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಜುಲೈ ಎರಡನೇ ವಾರದಿಂದ ಬೆಂಗಳೂರಿನಲ್ಲಿ ಅಕ್ಕಿ ಬೆಲೆ ಏರಿಕೆಯಾಗುತ್ತಿದೆ.
ಅನಿಯಮಿತ ಮಳೆಯಿಂದಾಗಿ ಭತ್ತದ ಬಿತ್ತನೆಯಾಗಿಲ್ಲ. ಇದು ಈಗ ಆತಂಕ ತಂದಿದೆ. ಹಲವೆಡೆ ಮಳೆ ಕೊರತೆಯಿಂದ ಬಿತ್ತನೆ ಕಾರ್ಯ ಇನ್ನೂ ಪ್ರಾರಂಭವಾಗಿಲ್ಲ. ಕಳೆದ ಬಾರಿ ಸ್ಟೀಮ್ ರೈಸ್ ಮತ್ತು ಭತ್ತ ಉತ್ಪಾದನೆಯಲ್ಲಿ ಶೇ.20 ರಷ್ಟು ಹೆಚ್ಚಾಗಿದೆ ಎಂದರು.