ಸುದ್ದಿಮೂಲ ವಾರ್ತೆ
ಬೆಂಗಳೂರು, ನ, 25: ಆಸಿಡ್ ದಾಳಿಗೆ ಒಳಗಾಗಿ ಬದುಕುಳಿದವರ ರಕ್ಷಣೆ, ಆರೈಕೆ ಮತ್ತು ಮಾನಸಿಕ ಸ್ಥೈರ್ಯ ತುಂಬುವ ಉದ್ದೇಶದಿಂದ ದೇಶದಲ್ಲೇ ಮೊದಲ ಬಾರಿಗೆ ಸುಸಜ್ಜಿತ ತರಬೇತಿ ಪಡೆದ ಮೊದಲ 25 ಜನರ ತಂಡ ಸಜ್ಜಾಗಿದೆ.
ದೇಶದ ಯಾವುದೇ ಭಾಗದಲ್ಲಿ ಆಸಿಡ್ ದಾಳಿಗೆ ಒಳಗಾದವರ ಪರವಾಗಿ ಕಾರ್ಯನಿರ್ವಹಿಸಲು ಈ ಸೇನಾನಿಗಳು ಸನ್ನದ್ಧವಾಗಿದ್ದು, ಅಗತ್ಯಕ್ಕೆ ಅನುಗುಣವಾಗಿ ಕೆಲಸ ಮಾಡಲಿದ್ದಾರೆ. ಆಸಿಡ್ ದಾಳಿಗೆ ತುತ್ತಾಗುವವರ ರಕ್ಷಣೆಗಾಗಿ ಅಗತ್ಯವಿರುವ ಪ್ರಥಮ ಚಿಕಿತ್ಸೆ ಪೆಟ್ಟಿಗೆಯೊಂದಿಗೆ ಚಿಕಿತ್ಸೆ ನೀಡಲು ಸರ್ವಸನ್ನದ್ಧರಾಗಿದ್ದಾರೆ. ಇಂತಹ ವಿನೂತನ ತರಬೇತಿಯನ್ನು ಎಮೋಷನಲ್ ಫಸ್ಟ್ ಏಯ್ಡ್ ಅಕಾಡೆಮಿ ಒದಗಿಸಿದ್ದು, ಹೈಬ್ರಿಡ್ ಮಾದರಿಯಲ್ಲಿ ಮೂರು ತಿಂಗಳ ಕಾಲ ಕಠಿಣ ತರಬೇತಿ ನೀಡಿದೆ. ಈ ವಲಯದಲ್ಲಿ ದೇಶದಲ್ಲಿಯೇ ಇದು ಮೊದಲ ಮತ್ತು ವಿನೂತನ ತಂಡವಾಗಿದೆ.
ನಗರದ ರಾಡಿಸನ್ ಬ್ಲ್ಯೂ ಹೋಟೆಲ್ ನಲ್ಲಿ ತರಬೇತಿ ಪಡೆದವರಿಗಾಗಿ ಎಮೋಷನಲ್ ಫಸ್ಟ್ ಏಯ್ಡ್ ಅಕಾಡೆಮಿಯಿಂದ ಅಯೋಜಿಸಲಾದ ಮೊದಲ ಘಟಿಕೋತ್ಸವದಲ್ಲಿ ಪ್ರಮಾಣ ಪತ್ರ ಪಡೆದು ಹೊಸ ಬದಲಾವಣೆ ತರಲು ಮತ್ತು ಹೊಸ ಸವಾಲಿಗೆ ಸಿದ್ಧವಾಗಿರುವುದಾಗಿ ತರಬೇತು ಪಡೆದವರು ಘೋಷಿಸಿದರು.
ಆಸಿಡ್ ದಾಳಿಯಿಂದ ಬದಕು ಜರ್ಝರಿತವಾದವರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಲು ಈ ತಂಡ ಕಾರ್ಯೋನ್ಮುಖವಾಗಿದೆ. ಎಮೋಷನಲ್ ಫಸ್ಟ್ ಏಯ್ಡ್ ಅಕಾಡೆಮಿ ಸಂಸ್ಥಾಪಕರಾದ ಪ್ರೊ. ಸುನಿತಾ ಕೆ. ಮಣಿ ಇಂತಹ ಮಾನವೀಯ ತರಬೇತಿ ಕಾರ್ಯದಲ್ಲಿ ನಿರತರಾಗಿದ್ದಾರೆ.
ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಆರೋಗ್ಯ ಕ್ಷೇತ್ರದಲ್ಲಿ ಇದು ಅತ್ಯಂತ ಮಹತ್ವದ ಬದಲಾವಣೆಯಾಗಿದ್ದು, ಪ್ರತಿವರ್ಷ ದೇಶದಲ್ಲಿ 800 ಕ್ಕೂ ಮಂದಿ ಆಸಿಡ್ ದಾಳಿಗೆ ಒಳಗಾಗುತ್ತಿದ್ದಾರೆ. ಆ್ಯಸಿಡ್ ದಾಳಿಯಿಂದ ಸಂತಸ್ತರಾದವರು, ಬದುಕುಳಿದವರ ಪುನಶ್ವೇತನಕ್ಕಾಗಿಯೇ ಮೀಸಲಾಗಿರುವ ಛಾನ್ವ್ ಪ್ರತಿಷ್ಠಾನದ ಸಹಯೋಗಲ್ಲಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಆಸಿಡ್ ಸಂತ್ರಸ್ತರ ನೋವು ಮತ್ತು ಯಾತನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ತರಬೇತಿಯಲ್ಲಿ ಮಾನಸಿಕ ಸಮಾಲೋಚಕರು, ಮನಶಾಸ್ತ್ರ ಅಧ್ಯಯನ ಮಾಡಿದವರು, ಐಟಿ – ಬಿಟಿ ವಲಯದವರೂ ಸಹ ಸೇರಿದ್ದಾರೆ. ಆಸಕ್ತರನ್ನು ಗುರುತಿಸಿ ತರಬೇತಿ ನೀಡಲಾಗಿದೆ ಎಂದು ಹೇಳಿದರು.
ತರಬೇತಿ ಪಡೆದುಕೊಂಡಿರುವ ಮಾನಸಿಕ ಸಮಾಲೋಚಕರಾದ ರಜನಿ ಮಾತನಾಡಿ, ಮಾನಸಿಕ ಸಮಸ್ಯೆ ಮತ್ತು ಆಸಿಡ್ ದಾಳಿಗೆ ಒಳಗಾಗಿ ಮಾನಸಿಕವಾಗಿ ತೊಂದರೆ ಎದುರಿಸುವವರ ನಡುವೆ ಭಿನ್ನತೆ ಇದೆ. ಇಂತಹ ಪ್ರಕರಣಗಳನ್ನು ಹಂತ ಹಂತವಾಗಿ ಹೇಗೆ ನಿಭಾಯಿಸಬೇಕು ಎಂಬ ಕುರಿತು ನಮಗೆ ಸಮಗ್ರ ತರಬೇತಿ ನೀಡಲಾಗಿದ್ದು, ದಾಳಿ ಸಂತ್ರಸ್ತರ ಸಂಕಟವನ್ನು ನಾವು ಮಟ್ಟಿಗೆ ಕಡಿಮೆ ಮಾಡುವ ವಿಶ್ವಾಸ ಹೊಂದಿದ್ದೇವೆ ಎಂದರು.
ಸಾಪ್ಟ್ ವೇರ್ ತಂತ್ರಜ್ಞ ಹೊನಿಶ್ ಮಾತನಾಡಿ, ಮಾನಸಿಕ ಸಮಾಲೋಚನೆ ತಮಗೆ ಹೊಸ ವಲಯವಾಗಿದ್ದು, ತಮಗಿರುವ ಆಸಕ್ತಿಯನ್ನು ಪರಿಗಣಿಸಿ ತರಬೇತಿ ನೀಡಲಾಗಿದೆ. ದಾಳಿ ಸಂತ್ರಸ್ತರು ಹೇಗೆ ವರ್ತಿಸುತ್ತಾರೆ, ಅವರ ಆರೈಕೆ ಮತ್ತಿತರ ವಿಚಾರಗಳನ್ನು ಸಮಗ್ರವಾಗಿ ಮನದಟ್ಟು ಮಾಡಿದ್ದಾರೆ. ಮಾಹಿತಿ ತಂತ್ರಜ್ಞಾನ ವೃತ್ತಿಯ ನಂತರ ಹೊಸ ಪ್ರವೃತ್ತಿಯಲ್ಲಿ ತೊಡಗಿಕೊಳ್ಳಲು ತಮಗೆ ಈ ತರಬೇತಿ ಸಹಕಾರಿಯಾಗಿದೆ ಎಂದು ಹೇಳಿದರು.
ಘಟಿಕೋತ್ಸವದಲ್ಲಿ ಮಾತನಾಡಿದ ಕ್ಲೌಡ್ ಫಿಸಿಶಿಯನ್ ಸಂಸ್ಥೆಯ ನಿರ್ದೇಶಕ ಡಾ. ಶಶಿ ಭಾಸ್ಕರ ಕೃಷ್ಣ ಮೂರ್ತಿ, ಆಸಿಡ್ ದಾಳಿಗೆ ಒಳಗಾಗುವವರು ಮಾನಸಿಕ ಒತ್ತಡ, ಏಕಾಂಗಿತನ ಮತ್ತಿತರೆ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಾರೆ. ಭವಿಷ್ಯದಲ್ಲಿ ಇಂತಹ ತೀವ್ರತೆರನಾದ ತೊಂದರೆಗಳನ್ನು ತಗ್ಗಿಸಲು ಇದು ಪರಿಣಾಮಕಾರಿ ತರಬೇತಿ ಎಂದರು.
ಆಸಿಡ್ ದಾಳಿಯಿಂದ ಬದುಕುಳಿದವರ ಪುನಶ್ವೇತನಕ್ಕಾಗಿಯೇ ಮೀಸಲಾಗಿರುವ ಛಾನ್ವ್ ಪ್ರತಿಷ್ಠಾನದ ಸಂಸ್ಥಾಪಕ ಅಲೋಕ್ ದೀಕ್ಷೀತ್ ಮಾತನಾಡಿ, ದೈಹಿಕ ಆರೋಗ್ಯದಂತೆ ಮಾಸಿಕ ಆರೋಗ್ಯ ಕೂಡ ಅಷ್ಟೇ ಮುಖ್ಯವಾದದ್ದು. ಆಸಿಡ್ ದಾಳಿಯಿಂದ ದೈಹಿಕ ಸಮಸ್ಯೆಗಳ ಜೊತೆಗೆ ಮಾನಸಿಕವಾಗಿಯೂ ತೊಂದರೆ ಎದುರಿಸುತ್ತಿರುವವರ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡುವ ಅಗತ್ಯವಿದೆ ಎಂದರು.
ಘಟಿಕೋತ್ಸವದಲ್ಲಿ ಮಾನಸಿಕ ಸಮಾಲೋಚಕ ಮ್ಯಾಥ್ಯು ಬೇಬಿ ತಾರಕನ್, ಅಮೃತ್ ಐಟಿ ಇನ್ಪೋಸಿಸ್ಟಮ್ಸ್ ನ ಸಂಸ್ಥಾಪಕ ಸಿ.ವಿ.ಜಿ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.