ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ ,ಜೂನ್23 : ದೆಹಲಿಯ ಇಂಡಿಯನ್ ಸ್ಕೂಲ್ ಆಫ್ ಡೆಮಾಕ್ರಸಿ ಎಂಬ ಸಂಸ್ಥೆ ದೇಶದ ವಿವಿಧ ರಾಜ್ಯಗಳಿಂದ 54 ಮಹಿಳಾ ಚುನಾಯಿತ ಪ್ರತಿನಿಧಿಗಳಿಗೆ ನಾಯಕತ್ವದ ಕುರಿತ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು.
ಗ್ರಾಮ ಪಂಚಾಯಿತಿ ಸದಸ್ಯರು,ಸಂಸದರು,ಶಾಸಕರು ಹಾಗೂ ನಗರಸಭಾ ಸದಸ್ಯರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಗಾರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಮಹಿಳಾ ಪ್ರತಿನಿಧಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.
ಭಾರತದ ರಾಜಕೀಯವನ್ನು ರೂಪಿಸುವ ಹಾದಿ, ಧೈರ್ಯ ಮತ್ತು ಸ್ಪೂರ್ತಿ ತುಂಬುವ ನಾಯಕತ್ವದ ಗುಣವನ್ನು ಮಹಿಳೆಯರಲ್ಲಿ ಬೆಳೆಸುವ ಸಲುವಾಗಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ದೇಶದ ವಿವಿಧ ರಾಜ್ಯಗಳಿಂದ ಅನೇಕ ಮಹಿಳಾ ಪ್ರತಿನಿಧಿಗಳೊಂದಿಗೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಖಜಾಂಚಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಶಿಡ್ಲಘಟ್ಟ ತಾಲೂಕಿನ ಜೆ.ವೆಂಕಟಾಪುರ ಗ್ರಾಪಂ ಉಪಾಧ್ಯಕ್ಷೆ ಶಶಿಕಲಾ ಅವರು ಪ್ರತಿನಿಧಿಸಿದರು.
ಗ್ರಾಪಂಯಲ್ಲಿ ಮಹಿಳಾ ಸದಸ್ಯರಿಗೆ ಇರುವ ಹಕ್ಕುಗಳು ಮತ್ತು ಸ್ಥಳೀಯ ಮಟ್ಟದಲ್ಲಿ ಯಾವ ರೀತಿ ಸಂಪನ್ಮೂಲಗಳನ್ನು ಕ್ರೂಢೀಕರಿಸಬೇಕು, ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲು ತೆರಿಗೆ ಸಂಗ್ರಹ ಹಾಗೂ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ಮುಕ್ತ ಪಾರದರ್ಶಕ ಆಡಳಿತವನ್ನು ಜಾರಿಗೊಳಿಸುವ ವಿಚಾರಗಳ ಬಗ್ಗೆ ಮಹಿಳಾ ಪ್ರತಿನಿಧಿಗಳಿಗೆ ಸೂಕ್ತ ರೀತಿಯ ಮಾಹಿತಿ ಮತ್ತು ಉಪನ್ಯಾಸವನ್ನು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ನೀಡಲಾಯಿತು.
ಮಹಿಳೆಯರನ್ನು ತುಳಿಯುವ ಮನಸ್ಥಿತಿ ಇರುವ ಸಮಾಜದಲ್ಲಿ ನೊಂದವರೇ ಜಾಸ್ತಿ ಆ ನೊಂದ ಮಹಿಳೆಯರಿಗೆ ಆತ್ಮವಿಶ್ವಾಸವನ್ನು ತುಂಬಿ ಹೊಸ ಚೈತನ್ಯವನ್ನು ನೀಡುವುದರ ಜೊತೆಗೆ ,ಗ್ರಾಮ ಪಂಚಾಯತಿಗಳ ಸಬಲೀಕರಣ ಮುಂದಿನ ದಿನಗಳಲ್ಲಿ ನಮ್ಮ ಸುತ್ತ ಮುತ್ತಲಿನ ಸಮಾಜಕ್ಕಾಗಿ ಮತ್ತು ಶಿಕ್ಷಣಕ್ಕಾಗಿ ಉತ್ತಮ ಸಂದೇಶ ನೀಡುವ ಜೊತೆಗೆ ನಮ್ಮ ಕೈಲಾದಷ್ಟು ಸಹಾಯ ಸಹಕಾರ ಉತ್ತಮವಾದಂತಹ ಬೆಳವಣಿಗೆಯನ್ನು ಮಾಡಲು ಸಾಧ್ಯವೆಂದು ಸಂಸ್ಥೆಯವರು ಅರ್ಥಪೂರ್ಣವಾಗಿ ಮನವರಿಕೆ ಮಾಡಿ ಕೊಟ್ಟಿದ್ದು ನಿಜಕ್ಕೂ ಅಭಿನಂದನೀಯ ಎಂದರಲ್ಲದೆ ಇದೇ ಮಾದರಿಯ ತರಬೇತಿ ಕಾರ್ಯಗಾರವನ್ನು ಕರ್ನಾಟಕದಲ್ಲಿ ಮಾಡಲು ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಸಹ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇನೆ ಎಂದು ಶಶಿಕಲಾ ಅವರು ತಮ್ಮ ಅನುಭವವನ್ನು ಹಂಚಿಕೊಂಡರು.