ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ.25: ಬೆಂಗಳೂರು – ಮೈಸೂರು ದಶಪಥ ಹೆದ್ದಾರಿ ಮಧ್ಯೆ ಟ್ರಾಮಾ ಕೇರ್ ಸೆಂಟರ್ ಮತ್ತು ಆಂಬುಲೆನ್ಸ್ ಸೇವೆ ಒದಗಿಸಿ ಜನರ ಜೀವ ರಕ್ಷಣೆ ಮಾಡುವಂತೆ ವಿಧಾನಪರಿಷತ್ ಸದಸ್ಯ ದಿನೇಶ ಗೂಳಿಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಅವರು, ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯು ಎರಡು ಮಹಾನಗರಗಳ ನಡುವೆ ಶೀಘ್ರ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. 3 ತಾಸಿನ ಸಂಚಾರದ ಅವಧಿಯನ್ನು ಒಂದೂವರೆ ತಾಸಿಗೆ ಇಳಿಸಿದೆ ಎಂಬುದು ನಿಜ. ಆದರೆ, ಇದು ಮರಣದ ದಾರಿಯೂ ಆಗಿರುವುದು ಮಾತ್ರ ದುರಂತ. ನಾಗರಿಕರು ಅತಿ ಬೇಗ ಹೋಗಬೇಕೆಂಬ ದಾವಂತದಲ್ಲಿ ಅಪಘಾತಗಳು ಸಂಭವಿಸುತ್ತಲೇ ಇವೆ. ಕೆಲವು ತಿಂಗಳಲ್ಲಿ ಅಪಘಾತಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಸಾವು-ನೋವುಗಳು ಸಂಭವಿಸುತ್ತಲೇ ಇವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ 55 ಕಿಮೀ, ಮಂಡ್ಯದಲ್ಲಿ 58 ಕಿಮೀ ಹಾಗೂ ಮೈಸೂರಿನಲ್ಲಿ 5 ಕಿಮೀ ಸೇರಿ ಒಟ್ಟು 118 ಕಿಮೀ ದೂರದ ಧಶಪಥ ಇದಾಗಿದೆ. ಈ ಮೂರೂ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಳೆದ 9 ತಿಂಗಳಲ್ಲಿ 595 ಅಪಘಾತಗಳು ಸಂಭವಿಸಿವೆ. 158 ಜನ ಜೀವ ಕಳೆದುಕೊಂಡಿದ್ದಾರೆ. ಕೇವಲ ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 55 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 52 ಮಂದಿ ತೀವ್ರ ಗಾಯಗೊಂಡಿದ್ದಾರೆ. ಇದೇ ಅವಧಿಯಲ್ಲಿ ಹೊಸ ಬೈಪಾಸ್ ನಲ್ಲಿ 269 ಅಪಘಾತಗಳು ಸಂಭವಿಸಿ 92 ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂಬುದು ಆಘಾತಕಾರಿ ಸಂಗತಿ ಎಂದಿದ್ದಾರೆ.
ಹೆದ್ದಾರಿಯಲ್ಲಿ ವೇಗಕ್ಕೆ ಮಿತಿ ಇಲ್ಲ. 120 ರಿಂದ 140 ಕಿಮೀ ವೇಗದಲ್ಲಿ ಎಲ್ಲ ವಾಹನಗಳು ಸಂಚರಿಸುತ್ತವೆ. ಅಲ್ಲದೇ, ಸರ್ವೀಸ್ ರಸ್ತೆ ಸೇರುವಲ್ಲಿ ನಾಮಫಲಕ ಇಲ್ಲದೇ ಇರುವುದು. ಇಳಿಜಾರುಗಳಲ್ಲಿ ರಸ್ತೆ ಜಾರುವುದು ಮುಂತಾದ ಕಾರಣಗಳಿಂದ ಅಪಘಾತಗಳು ಹೆಚ್ಚುತ್ತಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿವೆ. ಈ ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸಿದಲ್ಲಿ ಗಾಯಾಳುಗಳನ್ನು ಬೆಂಗಳೂರು ಅಥವಾ ಮೈಸೂರಿಗೆ ಸಾಗಿಸಬೇಕಿದೆ. ಎರಡೂ ನಗರಗಳು ಸಾಕಷ್ಟು ದೂರ ಇರುವುದರಿಂದ ಆ “ಗೋಲ್ಡನ್ ಅವರ್” ನಲ್ಲಿಯೇ ಸಾಕಷ್ಟು ಜನ ಗಾಯಾಳುಗಳು ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ ಎಂಬುದು ಕಟು ಸತ್ಯ. ಪ್ರತಿಯೊಬ್ಬರ ಜೀವವೂ ಅಮೂಲ್ಯ.
ಇದರಿಂದ ಬೆಂಗಳೂರು ಮೈಸೂರು ನಡುವೆ ಸುಸಜ್ಜಿತ ಟ್ರಾಮಾ ಕೇರ್ ಸೆಂಟರ್, ಆಧುನಿಕ ಸೌಲಭ್ಯಗಳಿರುವ ಆಸ್ಪತ್ರೆಯೊಂದನ್ನು ಪ್ರಾರಂಭಿಸಬೇಕು. ಅದು ಸಾಕಷ್ಟು ಜೀವ ಉಳಿಸಲು ಖಂಡಿತ ನೆರವಾಗಲಿದೆ. ಅಲ್ಲದೆ, ಹೆದ್ದಾರಿಯಲ್ಲಿ ಪ್ರತಿ 30ಕಿಮೀಗೆ ಒಂದು ಆಂಬುಲೆನ್ಸ್ ಇಡಬೇಕು. ಇದರಿಂದ ಅಪಘಾತ ಸಂಭವಿಸಿದ ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ಕೊಂಡೊಯ್ಯಲು ನೆರವಾಗಲಿದೆ. ಕೆಲವೊಮ್ಮೆ ಆಂಬುಲೆನ್ಸ್ ಬರುವುದು ವಿಳಂಬವಾಗಿಯೂ ಜೀವ ಹೋಗಿದ್ದಿದೆ. ಹೀಗಾಗಿ ಕೂಡಲೇ ಈ ಭಾಗದಲ್ಲಿ ಟ್ರಾಮಾ ಸೆಂಟರ್ ತೆರೆಯಬೇಕು ಎಂದು ದಿನೇಶ್ ಗೂಳಿಗೌಡ ಕೋರಿದ್ದಾರೆ.