ಬೆಂಗಳೂರು, ಏ.6: ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಗೆ ನಾಮಪತ್ರ ದಿನಾಂಕ ಸಮೀಪವಾಗುತ್ತಿದ್ದಂತೆ ಮೂರು ಪಕ್ಷಗಳಲ್ಲಿ ಅಭ್ಯರ್ಥಿಗಳ ಘೋಷಣೆ ಪ್ರಕ್ರಿಯೆ ಅಳೆದು ತೂಗಿ ಮಾಡಲು ನಿರ್ಧಾರ ಮಾಡಿವೆ.
ನವದೆಹಲಿಯಲ್ಲಿ ಬುಧವಾರ ಕಾಂಗ್ರೆಸ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ಜರುಗಿದ ಚುನಾವಣಾ ಸಮಿತಿ ಸಭೆಯಲ್ಲಿ 100 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದ್ದು, ಈಗಾಗಲೇ ಮಂಗಳವಾ ರಾತ್ರಿ ಅಖೈರುಗೊಳಿಸಲಾದ 49 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಗುರುವಾರ ಪ್ರಕಟವಾಗುವ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನವದೆಹಲಿಯಲ್ಲಿ ಇಂದು ತಿಳಿಸಿದ್ದಾರೆ.
ಕಾಂಗ್ರೆಸ್ ಚುನಾವಣಾ ಪರಿಶೀಲನಾ ಸಮಿತಿ ಮತ್ತು ಚುನಾವಣಾ ಸಮಿತಿಗಳು ಬುಧವಾರ ಸಭೆ ಸೇರಿ 100 ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅರ್ಧ ಕೆಲಸ ಪೂರ್ಣಗೊಳಿಸಿದ್ದು, ಇನ್ನೂ ಅರ್ಧ ಕೆಲಸ ನಾಳೆ ಮಧ್ಯಾಹ್ನ ಪುನಃ ಸಭೆ ಸೇರಿ ಅಂತಿಮಗೊಳಿಸುವುದಾಗಿ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಎರಡನೇ ಪಟ್ಟಿ ಬಿಡುಗಡೆಯಾಗುವುದೇ ಎಂದು ಕೇಳಿದ ಪತ್ರಕರ್ತರ ಪ್ರಶ್ನೆಗೆ ಸೂರ್ಯದೋಯ ಆಗಬೇಕಾಗಿದೆ ಎಂದು ಮಾರ್ಮಿಕವಾಗಿ ಉತ್ತರ ನೀಡುವ ಮೂಲಕ ಗುರುವಾರ ಬೆಳಗ್ಗೆ ಎರಡನೇ ಪಟ್ಟಿ ಪ್ರಕಟವಾಗುವ ಮುನ್ಸೂಚನೆಯನ್ನು ಡಿ.ಕೆ. ಶಿವಕುಮಾರ್ ನೀಡಿದ್ದು, ಇದಕ್ಕೆ ಪುಷ್ಠಿ ಎಂಬಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಗುರುವಾರ ಬೆಳಗ್ಗೆ 11ಕ್ಕೆ ಎರಡನೇ ಪಟ್ಟಿ ಬಿಡುಗಡೆ ಮಾಡುವುದಾಗಿ ದೆಹಲಿಯಲ್ಲಿ ತಿಳಿಸಿದ್ದಾರೆ.
ಎರಡನೇ ಪಟ್ಟಿಯಲ್ಲಿ ಯಾವ ಹೆಸರುಗಳಿವೆ ಎಂಬುದನ್ನು ಈಗ ಬಹಿರಂಗಗೊಳಿಸಲು ಸಾಧ್ಯವಿಲ್ಲ. ಪಟ್ಟಿ ಪ್ರಕಟವಾದ ಬಳಿಕವೇ ಅದು ಅಂತಿಮಗೊಳ್ಳಲಿದೆ ಎಂಬ ಹೇಳಿಕೆ ನೀಡಿದ್ದು, ಗುರುವಾರವೇ ಎರಡನೇ ಪಟ್ಟಿ ಪ್ರಕಟ ಎಂಬುದನ್ನು ಸುರ್ಜೇವಾಲ ಖಚಿತಪಡಿಸಿದ್ದಾರೆ.
ಉಳಿದಂತೆ ಬಿಜೆಪಿ ಮತ್ತು ಜೆಡಿಎಸ್ನ ಪಟ್ಟಿ ಪ್ರಕಟವಾದ ಮೇಲೆ ಕಾಂಗ್ರೆಸ್ನ ಮೂರನೇ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ಗುರುವಾರ ಮಧ್ಯಾಹ್ನ ಪುನಃ ಸೇರಲಿರುವ ಚುನಾವಣಾ ಸಮಿತಿ ಸಭೆಯಲ್ಲಿ ಅಂತಿಮ ನಿರ್ಧಾರವಾಗಲಿದೆ. ತಕ್ಷಣವೇ ಪಟ್ಟಿ ಪ್ರಕಟವಾದಲ್ಲಿ ಬಿಜೆಪಿ ಅಥವಾ ಜೆಡಿಎಸ್ನತ್ತ ಆಕಾಂಕ್ಷಿಗಳು ಜಿಗಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಅಳೆದು ತೂಗಿ ಕಾಂಗ್ರೆಸ್ ಈ ನಿರ್ಧಾರ ಮಾಡಿರುವುದಾಗಿ ಗೊತ್ತಾಗಿದೆ.
ಒಬ್ಬ ಅಭ್ಯರ್ಥಿಯನ್ನು ಮಾತ್ರ ಶಿಫಾರಸು ಮಾಡಲಾದ 49 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಆದರೆ, ಒಂದಕ್ಕಿಂತ ಹೆಚ್ಚು ಆಕಾಂಕ್ಷಿಗಳು ಇರುವ ಕ್ಷೇತ್ರಗಳಲ್ಲಿ ಒಮ್ಮತ ಮೂಡದ ಕಾರಣ ನಾಳೆ ಪುನಃ ಸಭೆ ಸೇರಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ. ರಾಯಚೂರು ನಗರ ಕ್ಷೇತ್ರ ಸೇರಿದಂತೆ ರಾಜ್ಯದ ನಾಲ್ಕೈದು ಕ್ಷೇತ್ರಗಳು ಅಭ್ಯರ್ಥಿಗಳ ಆಯ್ಕೆ ತೀವ್ರ ಕಗ್ಗಂಟಾಗಿದ್ದು, ಇದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ಗಾಂಧಿ ಅವರೇ ಅಂತಿಮ ಮಾಡಬೇಕಿರುವುದರಿಂದ ಬಹುಶಃ ಮೂರನೇ ಪಟ್ಟಿಯಲ್ಲಿ ಈ ಕ್ಷೇತ್ರಗಳಲ್ಲಿ ಅಂತಿಮಗೊಳ್ಳುವ ನಿರೀಕ್ಷೆ ಇದೆ.
ಏನಾದರೂ ಏ.10ರೊಳಗಾಗಿ ಮೂರನೇ ಪಟ್ಟಿ ಸಹ ಬಿಡುಗಡೆಯಾಗುವ ಸಾಧ್ಯತೆ ಇದೆ. ರಾಯಚೂರು ಜಿಲ್ಲೆಗೆ ಸಂಬಂಧಪಟ್ಟಂತೆ ಮಾನ್ವಿಯಿಂದ ಬಿ.ವಿ. ನಾಯಕ್, ದೇವದುರ್ಗದಿಂದ ಶ್ರೀದೇವಿ ನಾಯಕ್, ಸಿಂಧನೂರಿನಿಂದ ಹಂಪನಗೌಡ ಬಾದರ್ಲಿ, ಲಿಂಗಸೂಗೂರಿನಿಂದ ಡಿ.ಎಸ್. ಹೂಲಿಗೇರಿ, ರಾಯಚೂರಿನಿಂದ ಎನ್.ಎಸ್. ಬೋಸರಾಜ್ ಹೆಸರುಗಳು ಅಂತಿಮಗೊಂಡಿವೆ ಎಂದು ಹೇಳಲಾಗುತ್ತಿದೆಯಾದರೂ, ಈ ಪೈಕಿ ನಾಳೆ ಕೇವಲ ಸಿಂಧನೂರು ಮತ್ತು ಮಾನ್ವಿ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಮಾತ್ರ ಪ್ರಕಟವಾಗುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.
ರಾಯಚೂರು ನಗರ, ಲಿಂಗಸೂಗೂರು, ದೇವದುರ್ಗದಿಂದ ಗುರುವಾರ ಮತ್ತೊಂದು ಸುತ್ತಿನ ಚರ್ಚೆ ನಡೆಯಲಿದ್ದು, ಅಲ್ಪಸಂಖ್ಯಾತರಿಗೆ ರಾಜ್ಯದ ಎಲ್ಲಿ ಹೊಂದಾಣಿಕೆ ಮಾಡಬೇಕು ಎಂಬುದರ ಮೇಲೆ ರಾಯಚೂರು ನಗರ ಕ್ಷೇತ್ರದ ಟಿಕೆಟ್ ನಿರ್ಧಾರವಾಗಲಿದೆ ಎಂದು ಗೊತ್ತಾಗಿದೆ. ಈ ಎಲ್ಲಾ ಬೆಳವಣಿಗೆ ಮಧ್ಯೆ ಬಿಜೆಪಿ ಮೊದಲೇ ಪಟ್ಟಿ ಪ್ರಕಟವಾದ ನಂತರವೇ ಕಾಂಗ್ರೆಸ್ ಮೂರನೇ ಪಟ್ಟಿ ಪ್ರಕಟ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.