ಸುದ್ದಿಮೂಲ ವಾರ್ತೆ
ಮೈಸೂರು,ಅ.26:ಬಂದರೆ ಹೋಗಲೇ ಬೇಕು…ಬಂದ ಜಾಗಕ್ಕೆ… ಇದು ಪ್ರಕೃತಿ ನಿಯಮ… ಇದಕ್ಕೆ ಮಾನವರಾದಿಯಾಗಿ ಯಾರು ಹೊತರಲ್ಲ
ನಿಜ… ಅದರಂತೆ ವಿಶ್ವ ಪ್ರಸಿದ್ಧ ದಸರೆ ಜಂಬೂ ಸವಾರಿ ಮೆರವಣಿಗೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಪಡೆಗೆ ಗುರುವಾರ ಮರಳಿ ಕಾಡಿನತ್ತ ಪಯಣ ಬೆಳೆಸಿದವು.
ಅರಮನೆ ಆವರಣದಲ್ಲಿ 56 ದಿನಗಳಿಂದ ಅತಿಥ್ಯದ ಅತಿಥಿಗಳಾಗಿದ್ದ ಗಜಪಡೆಗಳನ್ನು ಹೋಗಿ ಬನ್ನಿ ಮತ್ತೆ 2024 ರ ದಸರಾದಲ್ಲಿ ಸಿಗೋಣ, ನಿಮಗೆ ಶೂಭವಾಗಲಿ ಎಂದು ಪ್ರೀತಿಯಿಂದ ಅರಸಿ, ಹಾರೈಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಗಜಪಡೆಗೆ ಪೂಜೆ ಸಲ್ಲಿಸಿದ ನಂತರ ಮಾವುತ ಹಾಗೂ ಕಾವಾಡಿಗಳನ್ನು ಅರಮನೆ ಆಡಳಿತ ಮಂಡಳಿ ಮತ್ತು ಜಿಲ್ಲಾಡಳಿತದಿಂದ ಸನ್ಮಾನಿಸಿ ಗೌರವಿಸಲಾಯಿತು. ಗಜಪಡೆಗಳಾದ ಅಭಿಮನ್ಯು, ಅರ್ಜುನ, ದನಂಜಯ, ಮಹೇಂದ್ರ, ಲಕ್ಷ್ಮಿ, ವರಲಕ್ಷ್ಮಿ, ಭೀಮ, ಕಂಜನ್, ಗೋಪಿ, ಹಿರಣ್ಯ, ಸುಗ್ರೀವ, ವಿಜಯ, ರೋಹಿತ್ ಹಾಗೂ ಪ್ರಶಾಂತ್ ಆನೆಗಳು ಯಶಸ್ವಿ ಜಂಬೂ ಸವಾರಿಯಲ್ಲಿ ತಮ್ಮ ಪಾತ್ರ ಮುಗಿಸಿ ಕಾಡಿನತ್ತ ತೆರಳಿದವು. ಅವುಗಳ ಜೊತೆಯಲ್ಲಿ ಬಂದಿದ್ದ ಕಾವಾಡಿ ಹಾಗೂ ಮಾವುತರ ಕುಟುಂಬದವರು ಹ ನಗರ ಬಿಟ್ಟು ತಮ್ಮ ನೆಲೆಗಳತ್ತ ಹಿಂತಿರುಗಿದರು.
ಮಾವುತ, ಕಾವಾಡಿಗರಿಗೆ ಗೌರವ ಧನದ ಚೆಕ್ ನೀಡಲಾಯಿತು. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಅರಣ್ಯ ಅಧಿಕಾರಿಗಳು ಇದ್ದರು. ಅಕ್ಬೋಬರ್ 24 ರಂದು ರಾಜ ಬೀದಿಗಳಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿ ಹುತ್ತು ಜಂಬೂಸವಾರಿ ಮೆರವಣಿಗೆಯಲ್ಲಿ ಯಶಸ್ವಿಯಾಗಿ ಭಾಗವಹಿಸಿದ ಅಭಿಮನ್ಯು ಮತ್ತು ತಂಡ ಒಲ್ಲದ ಮನಸ್ಸಿನಿಂದ ಮರಳಿ ಕಾಡಿಗೆ ತೆರಳಿದವು. ಕೆಲವು ಆನೆಗಳು ಮರಳಿ ಶಿಬಿರಕ್ಕೆ ಹೋಗಲು ಲಾರಿ ಹತ್ತದೆ ಕೆಲಕಾಲ ಸತಾಯಿಸಿದ ಮನಕಲಕುವ ಘಟನೆಯೂ ನಡೆಯಿತು. ಕೊನೆಗೆ ಅಭಿಮನ್ಯು ಇತರೆ ಆನೆಗಳನ್ನು ಬಲವಂತವಾಗಿ ಲಾರಿಗೆ ಹತ್ತಿಸಿ ಕಳುಹಿಸಿದ.ರೋಹಿತ್ ಆನೆಗೆ ಕಲ್ಲಂಗಡಿ, ಕಬ್ಬು ನೀಡಿ ಕಳುಹಿಸಿ ಕೊಡಲಾಯಿತು.
ಬೀಳ್ಕೊಡುಗೆ: ಗಜಪಡೆಯೊಂದಿಗೆ ಆಗಮಿಸಿದ ಆನೆ ರೋಹಿತನಿಗೆ ಕಲ್ಲಂಗಡಿ, ಕಬ್ಬು ನೀಡಿ ರಾಜವಂಸ್ಥೆ ಶೃತಿ ಕೀರ್ತಿದೇವಿ ಒಡೆಯರ್ ಪ್ರೀತಿಯಿಂದ ಬೀಳ್ಕೊಟ್ಟರು.
ರೋಹಿತನನ್ನು ಚೆನ್ನಾಗಿ ನೋಡಿಕೊಳ್ಳಿ.. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಹೋದರಿ ವಿಶಾಲಾಕ್ಷಿದೇವಿ, ಮರಿ ರೋಹಿತನನ್ನು 10 ವರ್ಷದ ನಂತರ ಅರಣ್ಯ ಇಲಾಖೆಗೆ ನೀಡಿದ್ದರು.
21 ವರ್ಷದ ರೋಹಿತ್ ನಡುವೆ ಒಡನಾಟ ಇಟ್ಟುಕೊಂಡಿರುವ ವಿಶಾಲಾಕ್ಷಿದೇವಿ ಅವರ ಮಗಳು ಶೃತಿ ಕೀರ್ತಿದೇವಿ, ಅರಮನೆಗೆ ಆನೆ ಬಂದಾಗಿನಿಂದ ಅದರ ಮೇಲೆ ವಿಶೇಷ ಕಾಳಜಿ ಹೊಂದಿದ್ದರು. ರೋಹಿತನಿಗೆ ಪ್ರಿಯವಾದ ಕಲ್ಲಂಗಡಿ, ಕಬ್ಬು ನೀಡುತ್ತಿದ್ದರು. ಅರಮನೆಯಿಂದ ಬಂಡೀಪುರದ ರಾಂಪುರ ಕ್ಯಾಂಪ್ಗೆ ರೋಹಿತ್ ಹೊರಡಿದ್ದು, ಲಾರಿ ಹತ್ತುವವರೆಗೂ ಅದರ ಜೊತೆಗೇ ಇದ್ದು, ಮಾವುತರು ಹಾಗೂ ಕಾವಾಡಿಗಳಿಗೆ ಚೆನ್ನಾಗಿ ನೋಡಿಕೊಳ್ಳಿ ಎಂದು ಕೋರಿದರು.
ಸಮತೋಲನ ಕಾಯ್ದುಕೊಂಡ ಅಭಿಮನ್ಯು
ನಾಲ್ಕನೆ ಬಾರಿ ಅಂಬಾರಿ ಹೊತ್ತ ಅಭಿಮನ್ಯುವಿನ ಮಾವುತ ವಸಂತ ತಮ್ಮ ಅನುಭವ ಹಂಚಿಕೊಂಡಿದ್ದು ಹೀಗೆ..
ತಾಯಿ ಶ್ರೀ ಚಾಮುಂಡೇಶ್ವರಿಯ ಆಶೀರ್ವಾದದಿಂದ ವಿಜಯದಶಮಿ ಮೆರವಣಿಗೆ ಸರಾಗವಾಗಿ ನಡೆದಿದ್ದು ಖುಷಿಯಾಗಿದೆ. ಅಭಿಮನ್ಯು ಬಗ್ಗೆ ಹೇಳುವುದಕ್ಕೆ ಮಾತೇ ಸಾಲದು. ತಾಯಿ ಇರುವವರೆಗೆ ಏನೂ ಆಗುವುದಿಲ್ಲ. 25 ವರ್ಷಗಳಿಂದ ನಾನು ದಸರಾದಲ್ಲಿ ಭಾಗವಹಿಸುತ್ತಿದ್ದೇನೆ. ಮೊದಲು ಜಂಬೂಸವಾರಿ ಮೆರವಣಿಗೆಯಲ್ಲಿ ಅಭಿಮನ್ಯು ಗಾಡಿ ಆನೆಯಾಗಿ, ನಂತರ ಛತ್ರಿ ಆನೆಯಾಗಿ ಕೆಲಸ ಮಾಡಿದ್ದಾನೆ. ಅಭಿಮನ್ಯು ಹುಲಿ ಸೆರೆ ಕಾರ್ಯಾಚರಣೆಯಲ್ಲೂ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ್ದಾನೆ. ನನಗೆ ನನ್ನ ತಂದೆ ದೇವರ ಸಮಾನ. ಅವರು ಪಳಗಿಸಿದ ಆನೆಯೇ ಈ ಅಭಿಮನ್ಯು. ಅವರ ಮಾರ್ಗದರ್ಶನದಲ್ಲಿ ಮುಂದುವರಿಯುತ್ತಿದ್ದೇನೆ.
ಈ ಸಲ ಜಂಬೂಸವಾರಿ ಕಟ್ಟುವಾಗ ಸ್ವಲ್ಪ ಹೆಚ್ಚು ಕಡಿಮೆ ಆಯಿತು. ಆದರೆ ಅಭಿಮನ್ಯು ತನ್ನ ಬೆನ್ನಿನ ಮೇಲೆ ಅಂಬಾರಿ ಕಟ್ಟಿದ ನಂತರ, ತನಗೆ ಹೇಗೆ ಬೇಕೋ ಹಾಗೆ ಅಂಬಾರಿಯನ್ನು ಸಮತೋಲನ (ಬ್ಯಾಲೆನ್ಸ್) ಮಾಡಿಕೊಂಡು, ಸುಸೂತ್ರವಾಗಿ ಮೆರವಣಿಗೆ ಮುಗಿಸಿದ ಎಂದು ಹೇಳುವಾಗ ವಸಂತ ಕಣ್ಣಂಚಿನಲ್ಲಿ ನೀರು ನಿಲ್ಲಲಿಲ್ಲ.