ಸುದ್ದಿಮೂಲವಾರ್ತೆ
ಕೊಪ್ಪಳ ಏ ೦೨: ಆಂಜನೇಯನ ಜನ್ಮ ಸ್ಥಳ ಅಂಜನಾದ್ರಿಯಲ್ಲಿ ಈಗ ಕೆಲವರು ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಮೊನ್ನೆ ವಿಜಯಪುರದ ಮಧ್ಯ ವಯಸ್ಕ ೧೦೧ ಕೆಜಿ ಭಾರದ ಚೀಲ ಹೊತ್ತು ಆಂಜನೇಯನ ದರ್ಶನ ಪಡೆದರೆ ಇಂದು ಕೊಪ್ಪಳ ಜಿಲ್ಲೆಯ ಯುವಕ ೧೦೫ ಕೆಜಿ ಭಾರದ ಚೀಲ ಹೊತ್ತು ಬೆಟ್ಟ ಏರಿ ಆಂಜನೇಯನ ದರ್ಶನ ಪಡೆದರು.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಆಂಜನೇಯನ ಜನ್ಮ ಸ್ಥಳವಾಗಿದೆ. ಸುಮಾರ ೫೭೪ ಮೆಟ್ಟಲು ಏರಿಯುವಲ್ಲಿ ಸಣ್ಣ ಚೀಲ ಹಿಡಿದು ಏರುವುದೇ ಕಷ್ಟವಾಗಿದೆ. ಅಷ್ಟು ಎತ್ತರಕ್ಕೇರಲು ಸಾಹಸ ಪಡಬೇಕಾಗಿದೆ. ಆದರೆ ಈಗ ಭಾರವಾದ ಚೀಲ ಹೊತ್ತು ಬೆಟ್ಟವನ್ನು ಏರುತ್ತಿರುವ ದುಸಾಹಸ್ಸವಾಗಿದೆ.
ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿಯ ಹನುಮಂತಪ್ಪ ಪೂಜಾರ ಎಂಬ ಕುರಿಗಾಹಿ ಇಂದು ಬೆಳಗಿನ ಜಾವ ಸ್ನೇಹಿತರೊಂದಿಗೆ ಬೆಟ್ಟ ಏರಿದರು. ೧೦೫ ಕೆಜಿ ತೂಕದ ಅಕ್ಕಿ ಚೀಲವನ್ನು ಹೆಗಲ ಮೇಲೆ ಹೊತ್ತು ೫೭೪ ಮೆಟ್ಟಲನ್ನು ಏರಿದರು. ಭಾರವಾದ ಚೀಲವನ್ನು ಹೊತ್ತು ಏರಲು ಸುಮಾರ ೫೦ ನಿಮಿಷ ತೆಗೆದುಕೊಂಡಿದ್ದಾರೆ.
ಹನುಮAತಪ್ಪ ಪೂಜಾರರಿಗೆ ಆಂಜನೇಯನ ದರ್ಶನ ಪಡೆಯುವ ಆಸೆ. ಈ ಸಂದರ್ಭದಲ್ಲಿ ಬರಿಗೈಯಲ್ಲಿ ಹೋಗುವದಕ್ಕಿಂತ ಭಾರವಾದ ಚೀಲ ಹೊತ್ತು ಹೋಗಬೇಕೆಂಬ ಆಸೆಯಿಂದ ಇಂದು ಮುಂಜಾನೆಯೇ ಚೀಲ ಹೊತ್ತು ಬೆಟ್ಟ ಏರಿ ಹನುಮಂತನ ದರ್ಶನವನ್ನು ಹನುಮಂತಪ್ಪ ಪಡೆದರು.
ಕಳೆದ ವಾರ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದ ರಾಯಪ್ಪ ದಫೇದಾರ ಎಂಬ ೪೬ ವರ್ಷದ ಮಧ್ಯ ವಯಸ್ಕ ೧೦೧ ಕೆಜಿ ಭಾರದ ಚೀಲ ಜೋಳದ ಚೀಲವನ್ನು ಹೊತ್ತು ೧.೧೦ ತಾಸಿನಲ್ಲಿ ಬೆಟ್ಟ ಏರಿದ್ದರು. ಈಗ ಹನುಮಂತಪ್ಪ ೧೦೫ ಕೆಜಿ ಭಾರದ ಚೀಲವನ್ನು ೫೦ ನಿಮಿಷದಲ್ಲಿ ಏರಿದ್ದಾರೆ.ಈ ಇಬ್ಬರ ಸಾಹಸದ ಕಾರ್ಯ ಜನರು ಮೆಚ್ಚುಗೆಯ ಜೊತೆಗೆ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.