ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.2: ಬೇರೆಲ್ಲ ಅತ್ಯಾಚಾರ ಪ್ರಕರಣಗಳಂತೆ ಕೋರಮಂಗಲದ ಸಾಮೂಹಿಕ ಅತ್ಯಾಚಾರ ಪ್ರಕರಣವೂ ಮರೆಯಾಗಲು ಅವಕಾಶ ನೀಡದೇ, ಸಿಎಂ ಬಸವರಾಜ ಬೊಮ್ಮಾಯಿಯವರು ಮಧ್ಯ ಪ್ರವೇಶಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಬೇಕು ಎಂದು ಖ್ಯಾತ ನಾಟಕಕಾರ ಗುಬ್ಬಿ ವೀರಣ್ಣರವರ ಮರಿಮೊಮ್ಮಗಳು, ಆಮ್ ಆದ್ಮಿ ಪಾರ್ಟಿ ನಾಯಕಿ ಸುಷ್ಮಾ ವೀರ್ ಆಗ್ರಹಿಸಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನ ಕೋರಮಂಗಲದಲ್ಲಿ ಯುವತಿಯ ಮೇಲೆ ಸುಮಾರು ಎರಡೂವರೆ ಗಂಟೆಗಳ ಕಾಲ ನಿರಂತರವಾಗಿ ಅತ್ಯಾಚಾರ ನಡೆದಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ. ಕೋರಮಂಗಲದಂತಹ ಸುಸಂಸ್ಕೃತ ಪ್ರದೇಶದಲ್ಲೇ ಇಂತಹ ವಿಕೃತ ಘಟನೆ ನಡೆದಿದೆ. ಕೃತ್ಯ ನಡೆದ ನಂತರ ಆರೋಪಿಗಳನ್ನು ಬಂಧಿಸಿ ಸುಮ್ಮನಾಗುವ ಪೊಲೀಸರು, ಇಂತಹ ಘಟನೆಗಳು ನಡೆಯದಂತೆ ಯಾವುದೇ ಮುನ್ನೆಚ್ಚರಿಕೆ ವಹಿಸುತ್ತಿಲ್ಲ. ಅತ್ಯಾಚಾರದಂತಹ ಗಂಭೀರ ಅಪರಾಧಗಳು ನಡೆದಾಗಲೂ ಸರ್ಕಾರ ಹಾಗೂ ಗೃಹ ಇಲಾಖೆ ಕಣ್ಣೊರೆಸುವ ತಂತ್ರ ಅನುಸರಿಸುವುದು ದುರದೃಷ್ಟಕರ ಎಂದು ಹೇಳಿದರು.
ಒಂದು ಹೆಣ್ಣಿನ ಮೇಲೆ ದೈಹಿಕವಾಗಿ ಅತ್ಯಾಚಾರವಾದರೆ, ಆಕೆಯ ಇಡೀ ಕುಟುಂಬ ಮಾನಸಿಕ ಅತ್ಯಾಚಾರಕ್ಕೆ ಒಳಗಾಗುತ್ತದೆ. ಆ ಕುಟುಂಬಕ್ಕೆ ಈ ಘಟನೆಯು ಶಾಶ್ವತವಾಗಿ ಕಳಂಕವಾಗಿ ಉಳಿದುಬಿಡುತ್ತದೆ. ಆದ್ದರಿಂದ ಅತ್ಯಾಚಾರ ಪ್ರಕರಣಗಳನ್ನು ನಿರ್ಲಕ್ಷ್ಯದಿಂದ ನೋಡುವುದು ಯಾವುದೇ ಕಾರಣಕ್ಕೂ ಸರಿಯಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆದೇಶ ನೀಡಬೇಕು ಎಂದರು.
ಆಮ್ ಆದ್ಮಿ ಪಾರ್ಟಿಯ ಮಾಧ್ಯಮ ವಕ್ತಾರೆ ಉಷಾ ಮೋಹನ್ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರವು ಮಹಿಳಾ ಸುರಕ್ಷತೆಯನ್ನು ನಿರಂತರವಾಗಿ ನಿರ್ಲಕ್ಷಿಸುತ್ತಾ ಬಂದಿದೆ. ಇದರ ವಿರುದ್ಧ ಆಮ್ ಆದ್ಮಿ ಪಾರ್ಟಿ ಹಲವು ಬಾರಿ ಪ್ರತಿಭಟನೆ ನಡೆಸಿ ಎಚ್ಚರಿಸಿದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಸಚಿವ ಆರಗ ಜ್ಞಾನೇಂದ್ರ ಗೃಹ ಇಲಾಖೆಯನ್ನು ನಿಭಾಯಿಸುವುದರಲ್ಲಿ ಸಂಪೂರ್ಣ ವಿಫಲವಾಗಿದ್ದು, ಅವರು ಹಾಗೂ ಮುಖ್ಯಮಂತ್ರಿ ಬೊಮ್ಮಾಯಿಯವರು ಕೋರಮಂಗಲ ಅತ್ಯಾಚಾರದ ಹೊಣೆ ಹೊರಬೇಕು. ನಿರ್ಭಯ ಸಿಸಿಟಿವಿಗಳನ್ನು ಕೂಡ ಅಳವಡಿಸದೇ ನಿರ್ಲಕ್ಷ್ಯತನ ತೋರುತ್ತಿರುವ ಭಂಡತನದ ಸರ್ಕಾರವಿದು. 40% ಕಮಿಷನ್ ದಂಧೆ ಹಾಗೂ ಒಡೆದಾಳುವುದನ್ನು ಬಿಟ್ಟು ಮತ್ತೆಲ್ಲದರಲ್ಲೂ ಬಿಜೆಪಿ ಸರ್ಕಾರ ಆಸಕ್ತಿ ಕಳೆದುಕೊಂಡಿದೆ ಎಂದು ಹೇಳಿದರು.