ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ.30: ಆಮ್ ಆದ್ಮಿ ಪಕ್ಷದ ನೂರಾರು ಕಾರ್ಯಕರ್ತರುಗಳು ಇಂದು ಬೆಳಿಗ್ಗೆ ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೇ ಹೆದ್ದಾರಿ ರಸ್ತೆಯ ಕಣಮಣಿಕೆ ಟೋಲ್ ಪ್ಲಾಜಾ ಬಳಿ ಸಾವಿನ ರಹದಾರಿ ಅಭಿಯಾನ ನಡೆಸಿದರು.
ಪಕ್ಷದ ಕಾರ್ಯಾಧ್ಯಕ್ಷ ಮೋಹನ್ ದಾಸರಿ ನೇತೃತ್ವದಲ್ಲಿ ನಡೆದ ಅಭಿಯಾನದಲ್ಲಿ ಸಾವಿರಾರು ವಾಹನ ಚಲಾಯಿಸುವವರಿಗೆ ಕರಪತ್ರಗಳನ್ನು ನೀಡುವ ಮೂಲಕ ಜಾಗರೂಕತೆಯಿಂದ ಚಲಿಸಿ, ಪ್ರಾಣವನ್ನು ಉಳಿಸಿಕೊಳ್ಳಿ ಎಂಬ ಸಂದೇಶವನ್ನು ನೀಡಿದರು.
ಕಳೆದ 9 ತಿಂಗಳುಗಳಿಂದ 165ಕ್ಕೂ ಹೆಚ್ಚು ಅಮಾಯಕ ಚಾಲಕರುಗಳ ಹಾಗೂ ಪ್ರಯಾಣಿಕರುಗಳ ಸಾವಿಗೆ ಬಿಜೆಪಿ ಸರ್ಕಾರವೇ ನೇರ ಹೊಣೆಯನ್ನು ಹೊರಬೇಕಾಗುತ್ತದೆ. ಹತ್ತು ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿಯೂ ಸಹ ಅವೈಜ್ಞಾನಿಕವಾಗಿ ಹಾಗೂ ಭ್ರಷ್ಟಾಚಾರ ಕೂಡಿರುವಂತಹ ಇಂತಹ ಹೆದ್ದಾರಿಗಳು ದೇಶಕ್ಕೆ ಅಪಮಾನಕಾರಿ ಆದಂತಹ ಸಂಗತಿ ಎಂದು ತಿಳಿಸಿದರು. ಸ್ವಾಧೀನ ಪ್ರಕ್ರಿಯೆಯಲ್ಲಿ ಸಂಪೂರ್ಣ ಭ್ರಷ್ಟಾಚಾರವಾಗಿದ್ದು ಈ ಹಿಂದಿನ ಬಿಜೆಪಿ ಸರ್ಕಾರವು ಸಂಪೂರ್ಣ ಹೊಣೆಗಾರಿಕೆಯನ್ನು ಹೊರಬೇಕಾಗುತ್ತದೆ ಹಾಗೂ ಈಗಿನ ಕಾಂಗ್ರೆಸ್ ಸರ್ಕಾರವು ಸೂಕ್ತ ತನಿಖೆ ನಡೆಸಿ ಹೆದ್ದಾರಿಯನ್ನು ಸರಿಪಡಿಸಬೇಕಾಗುತ್ತದೆ ಎಂದು ಮೋಹನ್ ದಾಸರಿ ತಿಳಿಸಿದರು.
ಸರ್ಕಾರವೇ ಈ ಹೆದ್ದಾರಿಯ ಟೋಲ್ ಸಂಗ್ರಹ ಮಾಡಬಾರದೆಂದು ತಿಳಿಸಿದ್ದರೂ ಸಹ ಜುಲೈ ಒಂದರಿಂದ ಶ್ರೀರಂಗಪಟ್ಟಣದಲ್ಲಿ ಟೋಲ್ ಸಂಗ್ರಹಣೆ ಮಾಡುತ್ತಿರುವುದು ಭಾರತೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ದುರ್ನಡತೆಗೆ ಸಾಕ್ಷಿ. ರಾಜ್ಯ ಕಾಂಗ್ರೆಸ್ ಸರ್ಕಾರವು ಸೂಕ್ತ ಆದೇಶವನ್ನು ನೀಡಬೇಕಾಗಿದೆ ಎಂದು ತಿಳಿಸಿದರು.
ಅಭಿಯಾನದಲ್ಲಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ, ರಾಜ್ಯ ಉಪಾಧ್ಯಕ್ಷ ಚನ್ನಪ್ಪ ಗೌಡ ನೆಲ್ಲೂರು, ಉಪಾಧ್ಯಕ್ಷ ಸುರೇಶ್ ರಾಥೋಡ್,ಬೆಂಗಳೂರು ನಗರ ಅಧ್ಯಕ್ಷ ಸತೀಶ್ ಮೋಹನ್, ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ, ರಾಮನಗರ ಜಿಲ್ಲಾಧ್ಯಕ್ಷ ಬೈರೇಗೌಡ, ಸುಷ್ಮಾ ವೀರ್, ನಾಗೇಂದ್ರ, ನಿರಂಜನ್,ಅಶೋಕ್ ಮೃತ್ಯುಂಜಯ, ವೀಣಾ ಸರ್ರಾವ್, ಜಗದೀಶ್ ಬಾಬು, ಜ್ಯೋತಿಶ್ ಕುಮಾರ್, ಮಹಾಲಕ್ಷ್ಮಿ, ವಿಶ್ವನಾಥ್ ಸೇರಿದಂತೆ ನೂರಾರು ಕಾರ್ಯಕರ್ತರುಗಳು ಭಾಗವಹಿಸಿದ್ದರು.