ಸುದ್ದಿಮೂಲ ವಾರ್ತೆ
ಕೋಲಾರ, ಮೇ 23: ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ನಜೀರ್ ಅಹ್ಮದ್ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋಲಾರ ಜಿಲ್ಲಾ ಮುಸ್ಲಿಂ ಯುನೈಟೆಡ್ ಫ್ರಂಟ್ ಅಧ್ಯಕ್ಷ ಅಬ್ದುಲ್ ಖಯೂಮ್ ಒತ್ತಾಯಿಸಿದೆ.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಮುಸ್ಲಿಮರಿಗೆ ಕಲ್ಪಿಸಲಿರುವ ಶೇ.4 ರಷ್ಟು ಮೀಸಲಾತಿಯನ್ನು ಜಾರಿಗೆ ತರಲು ನಜೀರ್ ಅಹ್ಮದ್ ಸಮರ್ಥ ವ್ಯಕ್ತಿಯಾಗಿದ್ದಾರೆ. ಅಪಾರ ಸಾಮರ್ಥ್ಯ, ಪ್ರಾಮಾಣಿಕತೆ, ಬದ್ಧತೆ, ಸಮರ್ಪಣಾ ಮನೋಭಾವ ಅವರಲ್ಲಿದೆ ಎಂದು ಕೋಲಾರ ಜಿಲ್ಲಾ ಮುಸ್ಲಿಂ ಯುನೈಟೆಡ್ ಫ್ರಂಟ್ ಅಧ್ಯಕ್ಷ ಅಬ್ದುಲ್ ಖಯೂಮ್ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರ ರದ್ದುಪಡಿಸಿದ ಮುಸ್ಲಿಂ ಸಮುದಾಯಕ್ಕೆ ಶೇಕಡಾ 4 ರಷ್ಟು ಮೀಸಲಾತಿಯನ್ನು ಮರು ಜಾರಿ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಶೇ.4ರಷ್ಟು ಮೀಸಲಾತಿಯ ಪ್ರಯೋಜನ ಮುಸ್ಲಿಂ ಸಮುದಾಯದ ಅರ್ಹ ವ್ಯಕ್ತಿಗಳಿಗೆ ತಲುಪುವುದನ್ನು ಖಾತ್ರಿ ಪಡಿಸಲು ನಜೀರ್ ಅಹ್ಮದ್ ಸೂಕ್ತ ವ್ಯಕ್ತಿಯಾಗಿದ್ದಾರೆ. ಹೀಗಾಗಿ ಅವರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಬೇಕು ಮತ್ತು ಶೇಕಡಾ 4 ರಷ್ಟು ಮೀಸಲಾತಿಯನ್ನು ಜಾರಿಗೆ ತರುವ ಈ ಜವಾಬ್ದಾರಿಯನ್ನು ಅವರಿಗೆ ನೀಡಬೇಕು ಎಂದು ಅಬ್ದುಲ್ ಖಯೂಮ್ ಮನವಿ ಮಾಡಿದ್ದಾರೆ.
ನಜೀರ್ ಅಹ್ಮದ್ ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ ಮತ್ತು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿದ್ದಾರೆ. ಮುಸ್ಲಿಂ ಸಮುದಾಯದ ಕ್ಷೇಮಾಭ್ಯುದಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅವರ ಜ್ಞಾನ ಮತ್ತು ಅನುಭವವು ಅಪಾರವಾಗಿದೆ ಎಂದು ಅಬ್ದುಲ್ ಖಯೂಮ್ ಹೇಳಿದ್ದಾರೆ.
ನಜೀರ್ ಅಹ್ಮದ್ ಮುಸ್ಲಿಂ ಸಮುದಾಯದಲ್ಲಿ ಉತ್ತಮ ವಿಶ್ವಾಸಾರ್ಹ ಮತ್ತು ಸಮಗ್ರತೆಯ ವ್ಯಕ್ತಿ. ಅವರ ಮಾತಿಗೆ ಸಮುದಾಯ ಗೌರವ ನೀಡುತ್ತದೆ. ಅವರನ್ನು ಸಂಪುಟಕ್ಕೆ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ನಜೀರ್ ಅಹ್ಮದ್ ಮುಸ್ಲಿಂ ನಾಯಕರ ತಂಡದೊಂದಿಗೆ ರಾಜ್ಯದಾದ್ಯಂತ ಪ್ರವಾಸ ಮಾಡಿ, ಹಿಂದಿನ ಬಿಜೆಪಿ ಸರ್ಕಾರದ ಅಲ್ಪಸಂಖ್ಯಾತ ವಿರೋಧಿ ಮನೋಭಾವವನ್ನು ಸಮುದಾಯಕ್ಕೆ ವಿವರಿಸಿದ್ದಾರೆ, ಇದರಿಂದಾಗಿ ಲಕ್ಷಾಂತರ ಮುಸ್ಲಿಮರು ಕಾಂಗ್ರೆಸ್ ಗೆ ಈ ಬಾರಿ ಭಾರೀ ಬೆಂಬಲ ನೀಡಿದ್ದಾರೆ. ನಜೀರ್ ಅಹ್ಮದ್ ಅವರು ಜನರಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸಲ್ಲಿಸಿರುವ ಸೇವೆ ಪರಿಗಣಿಸಿ ಸೂಕ್ತ ಖಾತೆ ನೀಡಬೇಕು ಎಂದು ಖಯೂಮ್ ಮನವಿ ಮಾಡಿದ್ದಾರೆ.