ಸುದ್ದಿಮೂಲ ವಾರ್ತೆ
ಬೆಂಗಳೂರು, ಮಾ, 25; ಧಾರ್ಮಿಕ ಅಲ್ಪ ಸಂಖ್ಯಾತರಿಗೆ 2ಬಿ ಅಡಿ ಇದ್ದ ಶೇ4 ರಷ್ಟು ಮೀಸಲಾತಿಯನ್ನು ತೆಗೆದು ಹಾಕಿರುವ ರಾಜ್ಯ ಬಿಜೆಪಿ ಸರ್ಕಾರ, ವೀರಶೈವ ಪಂಚಮಸಾಲಿ ಮತ್ತು ವಕ್ಕಲಿಗ ಸಮುದಾಯಕ್ಕೆ ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಮೀಸಲಾತಿಯನ್ನು ವರ್ಗಾಯಿಸಲು ನಿರ್ಧರಿಸಿದೆ. ಚುನಾವಣೆ ಹತ್ತಿರವಿರುವಾಗಲೇ ಲಿಂಗಾಯತರು ಮತ್ತು ಒಕ್ಕಲಿಗರ ಸೆಳೆಯಲು ಸರ್ಕಾರ ತಂತ್ರ ರೂಪಿಸಿದೆ.
ಮೀಸಲಾತಿ ಹೆಚ್ಚಳಕ್ಕೆ ಪಟ್ಟು ಹಿಡಿರದಿರುವ ಎರಡು ಪ್ರಬಲ ಸಮುದಾಯಗಳನ್ನು ತಣ್ಣಗೆ ಮಾಡಲು ಶುಕ್ರವಾರ ನಡೆದಿ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಲಿಂಗಾಯತರು ಮತ್ತು ಒಕ್ಕಲಿಗರಿಗೆ ತಲಾ ಶೇ 2ಷ್ಟು ಮೀಸಲಾತಿ ಹೆಚ್ಚಳ ಮಾಡುವ ಮಹತ್ವದ ತೀರ್ಮಾನ ಮಾಡಲಾಗಿದೆ. ಈ ಮೂಲಕ ವೀರಶೈವ ಪಂಚಮಸಾಲಿ ಮತ್ತು ಇತರರನ್ನು ಒಳಗೊಂಡ ಲಿಂಗಾಯತರ ಮೀಸಲಾತಿ ಪ್ರಮಾಣ 2ಡಿ ಅಡಿ ಶೇ.5ರಿಂದ ಶೇ.7ಕ್ಕೆ ಹೆಚ್ಚಿದರೆ, ಒಕ್ಕಲಿಗರು ಮೀಸಲಾತಿ 2ಸಿ ಅಡಿ ಶೇ.4ರಿಂದ ಶೇ.6ಕ್ಕೆ ಹೆಚ್ಚಳವಾಗಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸುವ ಜೊತೆಗೆ ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳಿದ್ದು, ಇಲ್ಲಿ ಒಳ ಮೀಸಲಾತಿ ಜಾರಿಮಾಡಲು ಸಹ ನಿರ್ಧರಿಸಿದೆ.
ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಹಿಂದುಳಿದ ವರ್ಗಗಳ 2ಬಿ ಅಡಿ ಇದ್ದ ಶೇ 4 ರಷ್ಟು ಮೀಸಲಾತಿ ರದ್ದಾಗಿದೆ. ಈ ವರ್ಗದಡಿ ಕೂಡ ಧಾರ್ಮಿಕ ಅಲ್ಪ ಸಂಖ್ಯಾತರು ಆರ್ಥಿಕವಾಗಿ ಹಿಂದುಳಿದ ವರ್ಗದಡಿ ಸ್ಪರ್ಧೆ ಮಾಡಬೇಕಾಗಿತ್ತು. ಈಗ ಒಟ್ಟು ಶೇ 10 ರಷ್ಟು ಇಡಬ್ಲ್ಯುಎಸ್ ಮೀಸಲಾತಿ ವ್ಯಾಪ್ತಿಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಇದರಿಂದ ಹೆಚ್ಚಿನ ಅವಕಾಶಗಳು ದೊರೆಯಲಿವೆ ಎಂದು ಹೇಳಿದರು.
ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ನೀಡಲಾಗಿರುವ ಶೇ 10 ರಷ್ಟು ಮೀಸಲಾತಿ ಕಲ್ಪಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಕೂಡ ಅನುಮತಿ ನೀಡಿದ್ದು, ಹೀಗಾಗಿ ಧಾರ್ಮಿಕ ಅಲ್ಪ ಸಂಖ್ಯಾತರನ್ನು ಶೇ 10 ರ ಮೀಸಲಾತಿ ವ್ಯಾಪ್ತಿಗೆ ಸೇರ್ಪಡೆ ಮಾಡಲು ನಿರ್ಧರಿಸಲಾಗಿದೆ. 2ಬಿ ಅಡಿ ಇದ್ದ ನಿಯಮಗಳನ್ವಯವೇ ಆರ್ಥಿಕವಾಗಿ ಹಿಂದುಳಿದ ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಮೀಸಲಾತಿಗಾಗಿ ಹೋರಾಟ ಮಾಡಬೇಕಾಗುತ್ತದೆ. ಆದರೆ 2ಬಿ ಅಡಿ ಇದ್ದ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡುತ್ತಿಲ್ಲ. ಇದರ ಜೊತೆಗೆ ಪಿಂಜಾರ, ನದಾಫ್ ಸೇರಿದಂತೆ ವೃತ್ತಿ ಆಧಾರಿತ 12 ರಿಂದ 13 ಸಣ್ಣಪುಟ್ಟ ಜಾತಿಗಳನ್ನು ಗಮನದಲ್ಲಿಟ್ಟುಕೊಂಡು ಧಾರ್ಮಿಕ ಅಲ್ಪ ಸಂಖ್ಯಾತರಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ಲಿಂಗಾಯಿತರು ಮತ್ತು ಒಕ್ಕಲಿಗರು ತಲಾ ಶೇ 2 ರಷ್ಟು ಮೀಸಲಾತಿ ಹೆಚ್ಚಾಗಲಿದ್ದು, 2ಸಿ ಅಡಿ ವಕ್ಕಲಿಗರಿಗೆ ಶೇ 6 ರಷ್ಟು ಹಾಗೂ 2ಡಿ ಅಡಿಯಲ್ಲಿ ಲಿಂಗಾಯಿತರಿಗೆ ಶೇ 7 ರಷ್ಟು ಮೀಸಲಾತಿ ಕಲ್ಪಿಸಲು ನಿರ್ಧರಿಸಲಾಗಿದೆ. ಈ ಮೂಲಕ ಲಿಂಗಾಯಿತರು ಮತ್ತು ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಿ ಎರಡೂ ಸಮುದಾಯಗಳನ್ನು ಸಮಾಧಾನಪಡಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. 2ಬಿ ಅಡಿ ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಇದ್ದ ಮೀಸಲಾತಿಯನ್ನು ತೆಗೆದು ಪಿಂಜಾರ, ನದಾಫ್, ಚಪ್ಪರ್ ಬಂದ್ ಸೇರಿದಂತೆ 12 ರಿಂದ 13 ಜಾತಿಗಳ ಶ್ರೇಯೋಭಿವೃದ್ಧಿಗಾಗಿ ನಿಗಮ ರಚಿಸಲು ನಿರ್ಧರಿಸಲಾಗಿದೆ.
ಎಸ್.ಸಿ ಮತ್ತು ಎಸ್.ಟಿಗೆ ಇದ್ದ ಮೀಸಲಾತಿ ಪ್ರಮಾಣವನ್ನು ಅನುಕ್ರಮವಾಗಿ ಶೇ 17 ಮತ್ತು ಶೇ 7 ರಷ್ಟು ಹೆಚ್ಚಿಸಿದ್ದು, ಇದು ಈಗಾಗಲೇ ಜಾರಿಯಾಗಿದೆ. ಇದೀಗ ಪರಿಶಿಷ್ಟ ಜಾತಿಯಲ್ಲಿ ನಾಲ್ಕು ವಿಭಾಗಗಳಲ್ಲಿ ಒಳ ಮೀಸಲಾತಿ ಕಲ್ಪಿಸಲು ನಿರ್ಧರಿಸಲಾಗಿದೆ. ಸಚಿವ ಸಂಪುಟ ಉಪ ಸಮಿತಿ ಶಿಫಾರಸ್ಸಿನಂತೆ ಪರಿಶಿಷ್ಟ ಜಾತಿಯ ಎಡ ಶೇ 6 ಮತ್ತು ಬಲ ಪಂಗಡಕ್ಕೆ ಶೇ 5.5 ರಷ್ಟು, ಬಂಜಾರರು ಸೇರಿದಂತೆ ಸ್ಪರ್ಷ ಸಮುದಾಯಕ್ಕೆ ಶೇ 4 ಮತ್ತು ಇತರೆ ಜಾತಿಗಳಿಗೆ ಶೇ 1 ರಷ್ಟು ಮೀಸಲಾತಿ ದೊರೆಯಲಿದೆ.
ಎಸ್.ಸಿಯಲ್ಲಿ ಒಳ ಮೀಸಲಾತಿಗಾಗಿ ಹೋರಾಟ ನಡೆಯುತ್ತಿದೆ. ಎಸ್,ಸಿಗಳಲ್ಲಿ 101 ಜಾತಿಗಳಿವೆ. ಸ್ಪರ್ಷ ಮತ್ತು ಅಸ್ಪುರ್ಷ ಎಂಬ ವಿಭಜನೆ ಇದ್ದು, ಸಂವಿಧಾನದ 321 ಅಡಿ ನ್ಯಾಯ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಬೇಡಜಂಗಮ ಸಮುದಾಯದವರು ಎಸ್ಟಿ ಪ್ರವರ್ಗದಡಿ ಸೇರಿಸಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ, ಈ ಸಂಬಂಧ ಈಗಾಗಲೇ ಅಧಿಕಾರಿಗಳ ಸಮಿತಿ ರಚನೆ ಮಾಡಲಾಗಿದೆ. ಅವರಿಂದ ವರದಿ ಬಂದ ಬಳಿಕ ತೀರ್ಮಾನಿಸಲಾಗುವುದು ಎಂದು ಬೊಮ್ಮಾಯಿ ಇದೇ ಸಂದರ್ಭದಲ್ಲಿ ಹೇಳಿದರು.