ಸುದ್ದಿಮೂಲವಾರ್ತೆ ಮಾನ್ವಿ ಏ-1
ರಾಜ್ಯ ಸರ್ಕಾರ ಹಿಂದುಳಿದ ವರ್ಗ 2 ಬಿ ಅಡಿಯಲ್ಲಿ ಮುಸ್ಲಿಮರು ಹೊಂದಿದ್ದ ಶೇ.4 ರಷ್ಟು ಮೀಸಲಾತಿ ಸೌಲಭ್ಯವನ್ನು ರದ್ದು ಮಾಡಿರುವುದು ಸಂವಿಧಾನ ಬಾಹಿರ ಕ್ರಮವಾಗಿದೆ ಎಂದು ಮಾನ್ವಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹಾಗೂ ಮಾಜಿ ಪುರಸಭಾ ಸದಸ್ಯ ಜಿ.ಸಮದಾನಿ ನಾಯ್ಕ್ ಹೇಳಿದರು.
ಅವರಿಂದು ತಮ್ಮ ಕಾರ್ಯಾಲಯದಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು ರಾಜ್ಯ ಸರಕಾರ ಮುಸ್ಲಿಮರಿಗೆ ನೀಡುತ್ತಿದ್ದ 2 ಬಿ ಮೀಸಲಾತಿ ಹಿಂದಕ್ಕೆ ಪಡೆದಿರುವುದು ದ್ವೇಷದ ಭಾಗವಾಗಿದೆ. ಜಾತ್ಯಾತೀತ ದೇಶದಲ್ಲಿ ಬಿಜೆಪಿ ಸರಕಾರ ಇಂತಹ ನಿರ್ಣಯ ಕೈಗೊಂಡಿರುವುದು ಸಂವಿಧಾನ ವಿರೋಧಿ ಕ್ರಮವಾಗಿದೆ.
ಮುಸ್ಲಿಂ ಅಲ್ಪಸಂಖ್ಯಾತರ ಸಾಮಾಜಿಕ, ಅರ್ಥಿಕ ಹಿಂದುಳಿದಿರುವಿಕೆಯನ್ನು ಸಮಗ್ರವಾಗಿ ಗುರುತಿಸಿ, ಅವರ ಸಾಮಾಜಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ಅಭಿವೃದ್ಧಿಗಾಗಿ ಒಕ್ಕೂಟ ಸರ್ಕಾರಗಳೇ ಈ ಹಿಂದೆ ರಚಿಸಿದ ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ಸಮಿತಿ ವರದಿ ಹಾಗೂ ಮುಸ್ಲಿಂ ಜನ ಸಮುದಾಯದ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಸೌಲಭ್ಯ ನೀಡಬೇಕೆಂದು ಡಾ.ರಂಗನಾಥ ಮಿಶ್ರಾ ಸಮಿತಿ ವರದಿಗಳು ಸ್ಪಷ್ಟವಾಗಿ ಹೇಳಿವೆ. ಹೀಗಿರುವಾಗ ಮೀಸಲಾತಿ ಸೌಲಭ್ಯ ವಾಪಾಸು ಪಡೆದಿರುವುದು ಅಕ್ಷಮ್ಯವಾಗಿದೆ. ಕೂಡಲೇ ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು ಮಾಡಿರುವ ಆದೇಶವನ್ನು ಸರಕಾರ ಕೂಡಲೇ ಹಿಂದೆ ಪಡೆಯಬೇಕು ಎಂದು ಜಿ.ಸಮದಾನಿ ನಾಯ್ಕ್ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಸಲೀಮ್ ಪಾಷಾ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ನಗರ ಘಟಕ ಅಧ್ಯಕ್ಷ ಎಂ.ಡಿ.ಮೋಹಿನ್ ಖಾನ್ ಉಪಸ್ಥಿತರಿದ್ದರು