ತಿಪಟೂರು : ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ, ಅಸಭ್ಯ ಮೊಬೈಲ್ ಸಂದೇಶ ಕಳುಹಿಸಿರುವ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ
ಉಪನ್ಯಾಸಕ ಎಚ್.ಆರ್. ರಂಗನಾಥ್ ವಿರುದ್ದ ಕ್ರಮಕೈಗೊಳ್ಳಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಈ ಸಂಬಂಧ ಶುಕ್ರವಾರ ಉಪವಿಭಾಗಾಧಿಕಾರಿಗಳ ಕಚೇರಿಯ ಗ್ರೇಡ್-2 ತಹಸೀಲ್ದಾರ್ ಕೆ.ಎಲ್.ಪರಮೇಶ್ವರಯ್ಯನವರ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ಎಬಿವಿಪಿ ತುಮಕೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ್, ಉಪನ್ಯಾಸಕನ ದುರ್ವತನೆ ಕಾಲೇಜಿಗೆ ಕಪ್ಪುಚುಕ್ಕೆಯಿಟ್ಟಂತಾಗಿದೆ.
ಉಪನ್ಯಾಸಕನಿಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಆದರೆ, ಇದನ್ನು ವಿದ್ಯಾರ್ಥಿನಿಯರು ಧೈರ್ಯವಾಗಿ ಯಾರ ಬಳಿಯೂ ಹೇಳಿಕೊಂಡಿಲ್ಲ.
ನಂತರ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ವೈರಲ್ ಆದ ಮೇಲೆ ಈ ಘಟನೆ ಬೆಳಕಿಗೆ ಬಂದಿದೆ.
ಸುಮಾರು 3ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ಓದುತ್ತಿದ್ದು ಉಪನ್ಯಾಸಕನ ನೀಚ ವರ್ತನೆಯಿಂದ ಕಾಲೇಜಿನ ಘನತೆ ಗೌರವ ಹಾಳಾಗುತ್ತಿದ್ದು ಪೋಷಕರು ಮುಂದೆ ತಮ್ಮ ಮಕ್ಕಳನ್ನು ಕಾಲೇಜಿಗೆ ದಾಖಲಿಸಲು ಹೆದರುವಂತಾಗಿದೆ. ಆದ್ದರಿಂದ ಉಪನ್ಯಾಸಕ ರಂಗನಾಥನನ್ನು ಕೆಲಸದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ಗಣೇಶ್, ತಾಲೂಕು ಸಂಚಾಲಕ ಭರತ್ಗೌಡ, ವಿನಯ್,ಪ್ರಶಾಂತ್, ಗುರುಪ್ರಸಾದ್, ದೀಪಕ್ ಸೇರಿದಂರೆ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.