ಸುದ್ದಿಮೂಲ ವಾರ್ತೆ
ಮೇ15: ಜೀವಂತ ಸಮಾಧಿಯಾದರೆ ಸ್ವರ್ಗ ಸಿಗುವುದು ಎಂಬ ಪಾದ್ರಿ ಮಾತಿಗೆ ಬಲಿಯಾಗಿರುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು 200 ಮೃತ ದೇಹಗಳು ಪತ್ತೆಯಾಗಿದೆ.
ಕೀನ್ಯಾದ ಕಿಲಿಫಿಯ ಕರಾವಳಿ ಕೌಂಟಿಯಲ್ಲಿರುವ ಪಾದ್ರಿಯ 800 ಎಕರೆ ಭೂಮಿಯಲ್ಲಿ 200ಕ್ಕೂ ಹೆಚ್ಚಿನ ಶವಗಳು ಪತ್ತೆಯಾಗಿದ್ದು, ಶವಗಳನ್ನು ಹೊರ ತೆಗೆಯಲಾಗಿದೆ.
ಮೂಢ ನಂಬಿಕೆ ಎನ್ನುವುದು ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ ಇದಾಗಿದೆ. ಪಾದ್ರಿಯೊಬ್ಬರು ಹೇಳಿದ್ದ ಮಾತು ನಂಬಿ ಉಪವಾಸವಿದ್ದು ಸಮಾಧಿಯಾದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಮತ್ತು ಏಸುವನ್ನು ನೋಡಬಹುದು ಎಂಬ ಮಾತಿಗೆ ಬಲಿಯಾಗಿ ಸಾಕಷ್ಟು ಜನರು ಜೀವಂತ ಸಮಾಧಿಯಾಗಿದ್ದಾರೆ. ಇದೀಗ 200 ಶವಗಳ ಪತ್ತೆಯಾಗಿದ್ದು ಇನ್ನೂ 600 ಜನ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಶವಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು ಶವಾಗಾರಗಳು ತುಂಬಿವೆ. ಶವ ಪರೀಕ್ಷೆ ಪೂರ್ಣಗೊಳ್ಳುವವರೆಗೆ ನಾಲ್ಕು ದಿನ ಬಿಡುವು ತೆಗೆದುಕೊಳ್ಳಲಾಗಿತ್ತು, ಆಸ್ಪತ್ರೆಯ ಶವಾಗಾರವು 40 ಶವಗಳ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸರು ಪಾಲ್ ಮೆಕೆಂಜಿ ಎಂಬ ಪಾದ್ರಿಯನ್ನು ಬಂಧಿಸಿದ್ದಾರೆ. ಆತ್ಮಹತ್ಯೆಗೆ ಪ್ರೇರೇಪಿಸಲಿಲ್ಲ ಎಂದು ಅವರು ಹೇಳಿದ್ದಾರೆ. 2019ರಲ್ಲೇ ಚರ್ಚ್ ಅನ್ನು ಮುಚ್ಚಲಾಗಿದೆ ಎಂದಿದ್ದಾರೆ. ಪೊಲೀಸರು ಈಗ ಎಲ್ಲಾ ದೇಹಗಳಿಂದ ಡಿಎನ್ಎ ಮಾದರಿಗಳನ್ನು ಸಂಗ್ರಹಿಸುತ್ತಿದ್ದು, ನಂತರ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿದುಬಂದಿದೆ.