ಸುದ್ದಿಮೂಲ ವಾರ್ತೆ
ಬೆಂಗಳೂರು: ಜು. 23:ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಎಚ್. ಕಾಂತರಾಜು ನೇತೃತ್ವದ ಜಾತಿವಾರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯಿಂದ ಅಸಮಾನತೆ ತೊಡೆದು ಹಾಕಲು ಸಾಧ್ಯ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಿ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ದೇವಾಂಗ ಸಂಘದ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಂತರಾಜು ಅವರ ವರದಿಯಿಂದ ಪ್ರತಿಯೊಂದು ಸಮಾಜದ ಜನಸಂಖ್ಯೆ, ಶಿಕ್ಷಣ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸಮಾಜದ ಅಂಕಿ- ಅಂಶ ಸ್ಪಷ್ಟವಾಗಿ ತಿಳಿಯಲಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೇ ವರದಿ ಸಿದ್ಧವಾಗಿತ್ತು. ರಾಜಕೀಯ ಕಾರಣಗಳಿಗಾಗಿ ವರದಿ ಸ್ವೀಕಾರವಾಗಲಿಲ್ಲ. ಈ ಹಿಂದೆ ಅಧಿಕಾರಕ್ಕೆ ಬಂದ ಸರ್ಕಾರಗಳು ಕಾಂತರಾಜು ವರದಿ ಸ್ವೀಕಾರ ಮಾಡಲಿಲ್ಲ. ವರದಿ ಅನುಷ್ಠಾನದಿಂದ ಜಾತಿಗಳ ಸ್ಥಿತಿಗತಿ ಆಧರಿಸಿ ಶಿಕ್ಷಣ, ಉದ್ಯೋಗ ಸೇರಿ ನಾನಾ ವಲಯಗಳಲ್ಲಿ ಅವಕಾಶ ಮತ್ತು ಸೌಲಭ್ಯ ಸಿಗಲಿದೆ. ಸಮೀಕ್ಷೆ ವರದಿಯಿಂದ ಅಸಮಾನತೆ ತೊಡೆದು ಹಾಕಲು ಸಾಧ್ಯ ಎಂದು ಹೇಳಿದರು.
ಈ ಸಮುದಾಯದ ಮೂಲ ಕಸುಬು ನೇಕಾರಿಕೆ. ಚುನಾವಣಾ ಸಂದರ್ಭದಲ್ಲಿ ನೇಕಾರರಿಗೆ ಪ್ರಣಾಳಿಕೆಯಲ್ಲಿ ಘೋಷಿಸಿರುವ ಯೋಜನೆಗಳನ್ನು ನಮ್ಮ ಸರ್ಕಾರ ಜಾರಿಗೆ ತರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ದಯಾನಂದಪುರಿ ಮಹಾಸ್ವಾಮೀಜಿ, ಜವಳಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್, ಸಂಸದ ತೇಜಸ್ವಿ ಸೂರ್ಯ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್, ನೃಪತುಂಗ ವಿಶ್ವವಿಶ್ವ ವಿದ್ಯಾಲಯದ ಉಪಕುಲಪತಿ ಡಾ.ಶ್ರೀನಿವಾಸ್ ಬಳ್ಳಿ, ದೇವಾಂಗ
ನೌಕರರ ಸಂಘದ ಅಧ್ಯಕ್ಷ ಭಾಸ್ಕರಯ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.