ಬೆಂಗಳೂರು,ಆ.11:ಸಕಾಲ ಯೋಜನೆಯ ಅಡಿ ವಿಳಂಬ ಧೋರಣೆ ಸರಿಯಲ್ಲ, ಜನರಿಗೆ ಸಮಯಕ್ಕೆ ಸರಿಯಾಗಿ ಸರ್ಕಾರಿ ಸೇವೆಗಳನ್ನು ನೀಡಿ ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅವರು ತಾಕೀತು ಮಾಡಿದರು.
ಶುಕ್ರವಾರ ವಿಕಾಸಸೌಧದಲ್ಲಿ ಸಕಾಲ ಯೋಜನೆ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ಸಭೆಯಲ್ಲಿ ಅವಧಿ ಮೀರಿ ಬಾಕಿ ಉಳಿದ ಅರ್ಜಿಗಳಿಗೆ ಸಂಬಂಧಿಸಿದ ಕಾರಣ ಹಾಗೂ ಪರಿಹಾರದ ಬಗ್ಗೆಯೂ ಸಚಿವರು ಪರಿಶೀಲನೆ ನಡೆಸಿದರು.
ಈ ವೇಳೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವ ಕೃಷ್ಣ ಬೈರೇಗೌಡ, “ಸರ್ಕಾರಿ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಸಲುವಾಗಿ “ಸಕಾಲ” ಯೋಜನೆ ಆರಂಭಿಸಲಾಯಿತು. ಆದರೆ, ಜನಪರ ಸೇವೆ ನೀಡಬೇಕಾದ ಅಧಿಕಾರಿಗಳು ಸಾರ್ವಜನಿಕರ ಸೇವಾ ಅರ್ಜಿಗೆ ಸಂಬಂಧಿಸಿದಂತೆ ವಿಳಂಬ ದೋರಣೆ ಅನುಸರಿಸುತ್ತಿರುವುದು ಸರಿಯಲ್ಲ” ಎಂದು ಅಸಮಾಧಾನ ಹೊರಹಾಕಿದರು. ಅಲ್ಲದೆ, ವಿಳಂಬ ಮಾಡುತ್ತಿರುವ ಇಲಾಖೆಗಳ ಅಧಿಕಾರಿಗಳಿಗೆ ವಿಳಂಬ ಮಾಡದಂತೆ ತಾಕೀತು ಮಾಡಿದರು.
ಇದೊಂದು ಮಾದರಿ ಹಾಗೂ ಯಶಸ್ವಿ ಯೋಜನೆ. ನಮ್ಮ ಯೋಜನೆಯನ್ನು ಇತರೆ ರಾಜ್ಯಗಳು ಸಹ ಅನುಸರಿಸುತ್ತಿವೆ. ಜನರಿಗೆ ಇದರ ಮೂಲಕ ಉತ್ತಮ ಸೇವೆ ನೀಡಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶವೂ ಇದೆ. ಹೀಗಾಗಿ ಅಧಿಕಾರಿಗಳು ಜನರಿಗೆ ಸಮಯಕ್ಕೆ ಸರಿಯಾಗಿ ಸೇವೆ ನೀಡುವ ಮೂಲಕ ಜನಪರ ಮತ್ತು ಆಡಳಿತ ಸುಧಾರಣೆ ನಿಟ್ಟಿನಲ್ಲಿ ಸರ್ಕಾರದ ಜೊತೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಳೆದ 11 ವರ್ಷಗಳಿಂದ 1115 ಕ್ಕೂ ಹೆಚ್ಚು ಸರ್ಕಾರಿ ಸೇವೆಗಳನ್ನು “ಸಕಾಲ” ಯೋಜನೆಯ ಮೂಲಕ ಜನರಿಗೆ ತಲುಪಿಸಲಾಗುತ್ತಿದೆ. ಮತ್ತಷ್ಟು ಹೊಸ ಸೇವೆಗಳನ್ನು ಸಕಾಲದ ಅಡಿಯಲ್ಲಿ ಸೇರಿಸುವ ಚಿಂತನೆಯೂ ಇದೆ. ಆದರೆ, ಹಲವರಿಗೆ ಈಗಲೂ ಸಕಾಲದ ಬಗ್ಗೆ ಮಾಹಿತಿ ಇಲ್ಲ.
ಸಮಾಜದ ಕೊನೆಯ ವ್ಯಕ್ತಿಗೂ ಸಕಾಲದ ಉಪಯೋಗಗಳು ತಲುಪಬೇಕು ಎಂಬುದು ಕಾಂಗ್ರೆಸ್ ಸರ್ಕಾರದ ಉದ್ದೇಶ. ಆ ನಿಟ್ಟಿನಲ್ಲಿ ಜಾಗೃತಿ-ಅರಿವು ಮೂಡಿಸುವ ಕೆಲಸ ಆಗಬೇಕು. ಆ ನಿಟ್ಟಿನಲ್ಲೂ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಸಭೆಯಲ್ಲಿ, ಸಕಾಲ ಯೋಜನೆಯ ಅಡಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇವಾ ಅರ್ಜಿಗಳು ಬಾಕಿ ಇದ್ದು ಅದನ್ನು ಶೀಘ್ರ ವಿಲೇವಾರಿಗೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಮತ್ತಷ್ಟು ಹೊಸ ಸೇವೆಗಳನ್ನು “ಸಕಾಲ ಗ್ಯಾರಂಟಿ” ಗೆ ಸೇರಿಸುವ ಹಾಗೂ ಈ ಸೇವೆಯ ಬಗ್ಗೆ ಜನ ಜಾಗೃತಿ ಮೂಡಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕಂದಾಯ ಇಲಾಖೆ ಆಯುಕ್ತರಾದ ಸುನೀಲ್ ಕುಮಾರ್ ಸಭೆಯಲ್ಲಿ ಉಪಸ್ಥಿತರಿದ್ದರು.