ಸುದ್ದಿಮೂಲ ವಾರ್ತೆ
ಆನೇಕಲ್, ಆ. 13 : ಅಪಘಾತಗಳ ಹೆದ್ದಾರಿ ಎಂದೇ ಕುಖ್ಯಾತಿ ಪಡೆದಿರುವ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಭಾನುವಾರ ಅಧಿಕಾರಿಗಳೊಂದಿಗೆ ಎಡಿಜಿಪಿ ಅಲೋಕ್ ಕುಮಾರ್ ಗಸ್ತು ಹೊಡೆದಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ವೀರಸಂದ್ರ ಸಿಗ್ನಲ್ ನಿಂದ ಅತ್ತಿಬೆಲೆ ಗಡಿವರೆಗೆ ಪರಿಶೀಲನೆ ನಡೆಸಿದ ಎಡಿಜಿಪಿ ಅಲೋಕ್ ಕುಮಾರ್, ಅಪಘಾತಗಳು ಹೆಚ್ಚು ಸಂಭವಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ 44 ನ್ನು ಪರಿಶೀಲಿಸಿದರು, ರಾಜ್ಯದ ಹೆದ್ದಾರಿ ಕಳಪೆ ನಿರ್ವಹಣೆ ಹಾಗೂ ಹೆದ್ದಾರಿ ಅವ್ಯವಸ್ಥೆ ಕಂಡು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಪಘಾತಗಳ ಸ್ಥಳಗಳಾದ ಹುಸ್ಕೂರು ಗೇಟ್, ಕಿತ್ತಗಾನಹಳ್ಳಿ ಗೇಟ್, ಹಳೇ ಚಂದಾಪುರ ರೈಲ್ವೆ ಬ್ರಿಡ್ಜ್, ಗೆಸ್ಟ್ ಲೈನ್ ಮತ್ತು ಅತ್ತಿಬೆಲೆ ಗಡಿಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಹೆದ್ದಾರಿಯಲ್ಲಿ ಕಾಣದ ಸೂಚನಾ ಫಲಕಗಳು, ನಿರ್ವಹಣೆ ಇಲ್ಲದೆ ಮುರಿದ ಬಿದ್ದ ಬ್ಯಾರಿಕೇಡ್, ವಿದ್ಯುತ್ ಲೈಟ್ಸ್ ಅವ್ಯವಸ್ಥೆ, ಸರ್ವಿಸ್ ರೋಡ್ ಜೊತೆಗೆ ಕಂದಕಗಳನ್ನು ಕಂಡು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹೆದ್ದಾರಿಯ ನಿರ್ವಹಣೆ ಇಲ್ಲದೆ ಅಮಾಯಕರು ಅಪಘಾತದಲ್ಲಿ ಸಾವನ್ನಪ್ಪಿದರೆ ಸಹಿಸುವುದಿಲ್ಲ. ಆದಷ್ಟು ಶೀಘ್ರವಾಗಿ ಹೆದ್ದಾರಿಯಲ್ಲಿನ ಸಮಸ್ಯೆಗಳನ್ನು ನಿವಾರಿಸಬೇಕು. ಆ ಮೂಲಕ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸೂಚಿಸಿದರು.
ಇನ್ನೂ ಹೆದ್ದಾರಿಯ ಚಂದಾಪುರದ ಬಳಿ ಸರ್ವೀಸ್ ರಸ್ತೆಯನ್ನು ಸಂಪೂರ್ಣ ಒತ್ತುವರಿ ಮಾಡಿ ಬೀದಿ ಬದಿ ವ್ಯಾಪಾರಿಗಳು ಅಂಗಡಿಗಳು ಹಾಗೂ ಆಟೋ ಸ್ಟಾಂಡ್ ಮಾಡಿಕೊಂಡಿದ್ದು, ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರು ಹೈರಾಣಾಗುತ್ತಿದ್ದಾರೆ.. ಈ ಬಗ್ಗೆ ಪರಿಶೀಲನೆ ನಡೆಸಿದ ಎಡಿಜಿಪಿ ಅಲೋಕ್ ಕುಮಾರ್ ಕೂಡಲೇ ಎಲ್ಲಾ ಅಂಗಡಿಗಳನ್ನ ತೆರವು ಮಾಡಿ ಸರ್ವೀಸ್ ರಸ್ತೆಯನ್ನು ಸುಗಮ ಸಂಚಾರಕ್ಕೆ ಬಳಕೆ ಮಾಡಿಕೊಡಬೇಕು ಎಂದು ಸೂಚನೆ ನೀಡಿದರು.